Tuesday, 25 June 2013

ಗೋಡೆ

ಎರಡು ದಿನಗಳಾಗಿದ್ದವು ಊರು ಬಿಟ್ಟು ಹೊಗಿ. ತಾನಾಗೇ ಹೋದದ್ದು, ಗೆಳೆಯರ ಜೊತೆಗೆ, ಟ್ರೆಕ್ಕಿಂಗ್ ಎಂಬ ಹುಚ್ಚಿಗೋಸ್ಕರ. ಎರಡು ದಿನ ತುಂಬಾನೇ ಮಜಾ ಮಾಡಿದ್ದೂ ಆಯಿತು. ಕಾಡುಗಳ ಸುತ್ತಾಟ, ಸ್ವಗತದಲ್ಲಿಯ ಗೊಣಗಾಟ, ಮಧ್ಯ ರಾತ್ರಿ ಒಬ್ಬನೇ ನದಿ ದಂಡೆಯ ಮೇಲೆ ಕುಳಿತುಕೊಂಡು ಭೂತ, ದೇವರುಗಳ ಆಹ್ವಾನ ಮಾಡಿದ್ದೂ ಬಂತು. ಅದೇ ಎಲ್ಲೋ ಒಂದೆಡೆ ತಲೆಯಲ್ಲಿ ಕುಳಿತಿರಬಹುದೇನೋ.

ಮನೆಗೆ ಬಂದು ತಲುಪಿದಾಗ ಬೆಳಗ್ಗಿನ ಜಾವ ಮೂರು ಗಂಟೆ. ಒಳಗಡೆ ಬಂದು ಮುಖ ತೊಳೆದುಕೊಂಡು ಮಲಗಲು ಪ್ರಯತ್ನ ಮಾಡಿದ. ಎರಡು ದಿನಗಳ ಆಯಾಸದಿಂದಲೋ ಅಥವಾ ಹನ್ನೊಂದು ತಾಸುಗಳ ಪ್ರಯಾಣದಲ್ಲಿ ಐದು ಆರು ತಾಸು ಮಲಗಿದ್ದಕ್ಕೋ ಏನೋ, ಒಂಚೂರೂ ನಿದ್ದೆ ಬರಲಿಲ್ಲ. ನಿದ್ದೆ ಬರದೇ ಇದ್ದಾಗ ಇದೆಯಲ್ಲ ಫೇಸ್ ಬುಕ್ಕು, ಸರಿ, ಸುಮಾರು ಅರ್ಧಗಂಟೆ ಅದರಲ್ಲೇ ಕಳೆದ.

ಥಟ್ಟನೆ ಏನೋ ನೆನಪಾದಂತಾಯಿತು. ಅದೇನೋ ಬದಲಾವಣೆ. ಮನೆ ಎರಡು ದಿನಗಳ ಹಿಂದೆ ಬಿಟ್ಟು ಹೋಗಿರುವ ಹಾಗಿರಲಿಲ್ಲ. ಬಂದಾಗ ಲೈಟು ಹಾಕಿ ನೋಡಿರಲಿಲ್ಲವಾದ್ದರಿಂದ ಲೈಟ್ ಆನ್ ಮಾಡಿದ. ಅರೇ!! ಇದೇನಿದು, ಬೂಟು ಕಳಚುವಾಗ ಗಮನಕ್ಕೇ ಬಂದಿರಲಿಲ್ಲವಲ್ಲ, ಹಾಲ್ ನಲ್ಲಿ ಒಂದು ಗೋಡೆ ಎದ್ದು ನಿಂತಿದೇ !? ಇಟ್ಟಿಗೆಗಳಿಂದ ಕಟ್ಟಿದ ಗೋಡೆ, ಆಗಲೇ ನೀಟಾಗಿ ಬಣ್ಣ ಹಚ್ಚುವ ಪ್ರಯತ್ನವೂ ಆಗಿತ್ತು. ಅದರ ಮೇಲೆ ಓರಣವಾಗಿ ಜೋಡಿಸಿದ ಹಳೆಯ ಹೂವಿನ ಕುಂಡಗಳು, ಒಂದೆರಡು ಫೋಟೋಗಳು (ತನ್ನವೇ ಇರಬಹುದು), ಎಂದೂ ಕಂಡಿರದ ಪೇಂಟಿಂಗ್ ಗಳು ಆವರಿಸಿದ್ದವು. ಮೊದಲಿದ್ದ ದೊಡ್ಡ ಹಾಲ್ ಈಗ ಚಿಕ್ಕದಾಗಿ ಎರಡು ಭಾಗವಾಗಿತ್ತು. ಯಾಕೋ ಚಿಕ್ಕವನಿದ್ದಾಗ ನೋಡಿದ, ಅವುಗಳ ಬಡತನಕ್ಕೆ, ಅಲ್ಲಿ ಆಗುವ ಗಂಡ ಹೆಂಡಿರ ಜಗಳಕ್ಕೆ, ಅವುಗಳ ಹೊಲಸು ವಾಸನೆಗೆ ಹೇಸಿಸಿಕೊಂಡ ಗವರ್ನಮೆಂಟ್ quarters ಗಳ ಚಿಕ್ಕ ಕೋಣೆ ನೆನಪಿಗೆ ಬಂದಿತು. ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ಅಂದದ ಮನೆ ಕಟ್ಟಿಸಿ, ಮೇಲೆ ಲಕ್ಷಾನುಗಟ್ಟಲೆ ಹಣ ಸುರಿದು ಇಂಟೀರಿಯರ್ ಡೆಕೊರೆಟರ್ ನ್ನು ಬಾಡಿಗೆಗೆ ಹಿಡಿದು ಮನೆಯೆಲ್ಲ ಅಂದಗೊಳಿಸಿದ್ದೆನಲ್ಲ, ಇವರಿಗೇನು ಹಣದ ಬಗ್ಗೆ, ಮನೆಯ ಸೌಂದರ್ಯದ ಬಗ್ಗೆ ಏನೂ ಕಾಳಜಿ ಇಲ್ಲವೇ? ಗೋಡೆಯ ಮೇಲೆ ಮಕ್ಕಳು ಒಂದು ಚಿಕ್ಕಗೆರೆ ಮೂಡಿಸಿದರೂ ಕೂಗಾಡುವಾತ, ಮನೆಯಲ್ಲಿ ಯಾವ ಸಾಮಾನನ್ನೂ ಯಾರೂ ಇಲ್ಲಿಂದ ಅಲ್ಲಿ ಅಲ್ಲಿಂದ ಇಲ್ಲಿಇಡುವ ಹಾಗಿಲ್ಲದಂತೆ ತಾಕೀತು ಮಾಡಿಟ್ಟಿರುವ ನಿಷ್ಠುರ ಅವನು. ಕ್ಷಣದಲ್ಲೇ ಕೋಪ ಬಂದಿತು. ಹೆಂಡತಿಗೆ ಕರೆದ.

ರಾತ್ರಿ ನಾಲ್ಕು ಗಂಟೆಗೇನಿದು ಇವನ ಕಾಟವಂತಲೋ ಅಥವಾ ಇದಕ್ಕೂ ಮುಂಚೆ ನೋಡಲೇ ಇಲ್ಲ ಪೆದ್ದು ಮುಂಡೇದು ಅಂತಲೋ ಏನೋ ಒಂಥರಾ ವಿಚಿತ್ರ ಭಾವ ಅವಳ ಮುಖದ ಮೇಲೆ. "ಏನೇ, ಇದೇನಿದು ಇಷ್ಟೊಂದು ಚೇಂಜ್ ಆಗಿಬಿಟ್ಟಿದೆ, ಇದೆಲ್ಲ ಯಾವಾಗ, ಯಾರು ಹೆಂಗೆ ಮಾಡಿದ್ರು? ಇಷ್ಟೆಲ್ಲಾ ಮಾಡೋಕಿಂತ ಮುಂಚೆ ನನಗೊಂದು ಮಾತು ಹೇಳ್ಬೇಕು ಅಥವಾ ಕೇಳ್ಬೇಕು ಅಂತಾನೂ ಅನಿಸ್ಲಿಲ್ವ ನಿಂಗೆ ? ಯಾಕೆ ಹೀಗೆಲ್ಲ ಮಾಡಿಸ್ದೆ ?" ಅಂತ ಏನೇನೋ ಗೊಣಗಿದ. ಅಲ್ವೇ ಮತ್ತೆ, ಗೊಣಗಿದ್ದಷ್ಟೇ ಕೇಳಿಸಿದ ಥರ ಇತ್ತು. "ನೋಡಿ ನಾನು ಹೇಳಿರ್ಲಿಲ್ವ? ಅವರಿಗೆ ಕೋಪ ಬರಬಹುದು ಅಂತ?" ಅಂತ ಅವಳು ಅವನಮ್ಮನಿಗೆ ಕೇಳಿದಳು. ಅಮ್ಮ ಏನಾದರೂ ಹೇಳುವ ಮುಂಚೆಯೇ ಕೋಪದಿಂದ ಇವನು ಮನೆಯಿಂದ ಆಚೆ ಬಿದ್ದ ನೆನಪು.

ಕಾಲುಗಳು ಎಲ್ಲೋ ಎಳೆಯುತ್ತಿವೆ. ತಮ್ಮ ಅಪಾರ್ಟ್ ಮೆಂಟ್ ಸುತ್ತ ಹೋಗುತ್ತಿದ್ದಾನೆ, ಸುಮಾರು ಜನಗಳು ಪರಿಚಯದವರು ಅಲ್ಲಿಇಲ್ಲಿ ಅಲೆದಾಡುತ್ತಿದ್ದಾರೆ. ಕೆಲವರು ಸಿಮ್ಮಿಂಗ್ ಪೂಲ್ ನಲ್ಲಿ... ಅರರೆ !! ಇದೇನಿದು, ಮೊದಲ್ಲಿದ್ದ ಸ್ವಿಮ್ಮಿಂಗ್ ಪೂಲ್ ಎಲ್ಲಿ ಹೋಯಿತು? ಮೊದಲಿದ್ದಕ್ಕಿಂತ ನಾಲ್ಕು ಪಟ್ಟು ದೊಡ್ಡ ಪೂಲ್ ಕಾಣಿಸಿಕೊಂಡಿದೆ. ಬೇರೆ ಬೇರೆ ಬಣ್ಣಗಳ ಹೂವಿನ ಕುಂಡಗಳು, tiles ಗಳು, ಚಿತ್ರ ವಿಚಿತ್ರ design ಗಳು ಮೂಡಿವೆ. 'hi' ಎಂದು ತನ್ನೊಬ್ಬ ಪರಿಚಯದ ನೆರೆಯವನಿಗೆ ಕೈ ಮಾಡಿದ. ಅವನಿಗೆ ಇವನು ಕಾಣಲೇ ಇಲ್ಲ. ಮತ್ತೆ ತಲೆಯಲ್ಲೊಂದು ಸ್ಫೋಟ, ಅರೆ, ಇದೇನು ರಾತ್ರಿಯ ಇಷ್ಟೊತ್ತಿನಲ್ಲಿ ಇವರೆಲ್ಲ ಹೊರಗೆ ಬಂದಿದ್ದಾರೆ, ಸ್ವಿಮ್ಮಿಂಗ್ ಪೂಲಲ್ಲಿ ಮಜಾ ಮಾಡುತ್ತಿದ್ದಾರೆ? ಕಾಲೆಳೆಯುವತ್ತ ಕಾಲು ಹಾಕುತ್ತ ಮುಂದೆ ಹೊದ. ಇಲ್ಲ, ಎಲ್ಲ ಬದಲಾಗಿದೆ, ಎಲ್ಲವೂ ಬದಲಾಗಿದೆ. ಇಷ್ಟು ದೊಡ್ಡ ಅಪಾರ್ಟ್ ಮೆಂಟ್ ಗೆ ಮತ್ತೆ ಬಣ್ಣ ಹಚ್ಚಲಾಗಿದೆ. ಮೊದಲು ಇಲ್ಲಿ ಖಾಲಿ ಜಾಗ ಇರುತ್ತಿತ್ತು. ಈಗ ಅಲ್ಲೊಂದು ಸಣ್ಣ ದೇವಾಲಯ, ಬಹುಶಃ ಶಿವನದಿರಬಹುದು, builder ಕ್ರಿಸ್ತಿಯನ್ ಆದರೂ ಅವನ ಧರ್ಮ ಸಹಿಷ್ಣುತೆಯ ನಾಟಕಕ್ಕೆ ಮನದಲ್ಲೇ ಶಾಪ ಹಾಕಿದ. ಹಾಗೆಯೇ ಮುಂದೆ ನಡೆದರೆ ಒಂದು emergency ಚಿಕಿತ್ಸಾಲಯದ ಥರ ಏನೋ ತಲೆ ಎತ್ತಿದೆ. ಆಕಡೆ ಈಕಡೆ ಬೆಳೆದು ನಿಂತ ಗಿಡಗಳು. ಇವೆಲ್ಲ ಎರಡೇ ದಿನಗಳಲ್ಲಿ ಹೇಗೆ ಸಾಧ್ಯ? ತಾನು ತಮ್ಮದೇ ಅಪಾರ್ಟ್ ಮೆಂಟ್ ಗೆ ಬಂದಿದ್ದೀನೋ ಇಲ್ಲವೋ ಎಂದು ಇನ್ನೊಮ್ಮೆ ಖಾತ್ರಿ ಪಡಿಸಿಕೊಂಡ. ಹೌದು, ಸಂಶಯವೇ ಇಲ್ಲ, ತನ್ನದೇ. ಮುಖ ನೋಡಿಕೊಳ್ಳುವ, ಎಲ್ಲಾದರೂ ಕನ್ನಡಿ ಇದೆಯೇ ಎಂದು ಹುಡುಕಿದ, ಎಲ್ಲೂ ಕಾಣಲಿಲ್ಲ. ಕನ್ನಡಿ ಹುಡುಕಿ ತನ್ನ ಮುಖ ನೋಡಿಯೇ ತೀರಬೇಕೆಂಬ ವಿಪರೀತ ಕಾಮನೆ ಆಯಿತು. ಬಿಡಲೊಲ್ಲದು, ಅದೇನೋ ಒಂದು ಸಂಶಯ, ತನ್ನ ವಯಸ್ಸಿನ ಬಗ್ಗೆ, ತಾನು ತಾನೇ ಹೌದೋ ಅಲ್ಲವೋ ಎನ್ನುವ ಬಗ್ಗೆ. ಮನಸ್ಸು ತನ್ನದಿದ್ದು ಬೇರೆಯವರ ಶರೀರದಲ್ಲೇನಾದರೂ ಪ್ರವೆಶಿಸಿದೆನೇನೋ ಎಂಬ ಗೊಂದಲ. ಶರೀರ ತನ್ನದಿದ್ದು ಬೇರೆಯವರ ಮನಸ್ಸೇನಾದರೂ ಹೊಕ್ಕಿತೋ ಎಂಬ ಆತಂಕ. ಎರಡು ದಿನಗಳು ಇಪ್ಪತ್ತು ವರುಷದ coma ಇರಬಹುದೇ ಎಂಬ ಭಯ. ತಾನು ಸತ್ತು ಭೂತವಾಗಿದ್ದೇನೆಯೇ, ಜೀವಿಸ್ಸಿದ್ದಾಗೆಲ್ಲ ಭೂತವಾದರೆ ಏನೆಲ್ಲಾ ಮಾಡಬಹುದು ಎಂದು ಕಲ್ಪಿಸಿಕೊಂಡಿದ್ದೇ ನಿಜವಾಯಿತೇ ಎಂಬ ಖುಷಿ. ಇವೆಲ್ಲ ಪ್ರಶ್ನೆಗಳನ್ನು ಹೊತ್ತುಕೊಂಡು ಕನ್ನಡಿಯ ಹುಡುಕುತ್ತಾ ಓಡತೊಡಗಿದ. ಎರಡು ದಿನಗಳ ಟ್ರೆಕ್ಕಿಂಗ್ ನಲ್ಲಿ ಆಗಿದ್ದ ಆಯಾಸವನ್ನೆಲ್ಲ ಮರೆತು. ಜೀವಿತದ ದ ಬಗ್ಗೆಯೇ ಸಂಶಯ ಬಂದರೆ ಉತ್ತರಕ್ಕಾಗಿ ತಡಕಾಡುವ, ತಡಕಾಡುತ್ತ ಓಡುವ ಆ ಓಟದ ಮುಂದೆ ಬಹುಶಃ ಯಾವ ಆಲಸು, ಯಾವ ಸುಸ್ತೂ ಬಂಧನಕಾರಕ ಅಲ್ಲವೇನೋ. ಓಟ ತೀವ್ರವಾಗಿತ್ತು, ಜಿಟಿಜಿಟಿ ಮಳೆ ಬೇರೆ. ಪಕ್ಕದಲ್ಲೊಬ್ಬ ವಯಸ್ಸಾದವರು ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಅದೇನೋ ವಿಚಿತ್ರ. oh no! ತನಗಿಂತ ಸುಮಾರು ಇಪ್ಪತ್ತು- ಮೂವತ್ತು ವರುಷ ದೊಡ್ಡವರಿರಬಹುದು, ಮುಖದಲ್ಲೇನೋ ವಿಚಿತ್ರ ಛಾಯೆ, ಎದ್ದು ಕಾಣುತ್ತಿರುವ ಕಪೋಲಾಸ್ಥಿ. ಶೂನ್ಯದಲ್ಲಿ ದಿಟ್ಟಿಸುತ್ತಿರುವ ಆಳವಾದ ಕಣ್ಣುಗಳು. ಒಮ್ಮೆಲೇ ನೆನಪಿಗೆ ಬಂದಿತು, ತಾನು ಕ್ರಿಕೆಟ್ ನಲ್ಲಿ ರನ್ ಮಾಡುವಾಗ ಓಡುತ್ತಿರುವವರ ಹಾಗೆ ಓಡುತ್ತಿದ್ದೇನೆ, ಈ ಮಹಾಶಯ ನಡೆದೇ ತನಗಿಂತ ಮುಂದಕ್ಕೆ ಹೋಗುತ್ತಿದ್ದಾನಲ್ಲ? ಏನೋ ಕೇಳಲು ಹೋದ, ಊಹೂಂ, ಧ್ವನಿಯೇ ಹೊರಗೆ ಬರುತ್ತಿಲ್ಲ. ಅವರ ಭುಜದ ಮೇಲೆ ಕೈ ಇಡಲು ನೋಡಿದ. ಒಮ್ಮೆಲೇ ಒಂದು ಕಡೆ ಬಿಚ್ಚಿಕೊಂಡ ತಂತಿಯಲ್ಲಿ ವಿದ್ಯುಚ್ಛಕ್ತಿ ಪ್ರವಹಿಸಿ ನಡುಗುವ ಹಾಗೆ ಕಂಪಿಸಿ ಹೋದ! ಅವನ ಕೈ ಅವರ ಭುಜದ ಒಳಗೆ ತೋರಿ ಹೋದರೂ ಬರೀ ಗಾಳಿಯಲ್ಲಿ ಆಡುತ್ತಿರುವಂತೆ ತೋರಿತು. ಭಯವಾಗಿ ತಕ್ಷಣ ಓಡುವದನ್ನು ನಿಲ್ಲಿಸಿದ. ಹಿಂದೆ ಬಂದ ದಾರಿಯಲ್ಲಿಯೇ ಹೆಜ್ಜೆ ಹಾಕಿ ಮನೆ ಹುಡುಕಲು ಪ್ರಯತ್ನಿಸಿದ. ಬಹಳ ಬದಲಾವಣೆ ಆಗಿದ್ದರಿಂದ ಸ್ವಂತ ಮನೆ ಹುಡುಕಲು ಸ್ವಲ್ಪ ಹೊತ್ತೇ ಬೇಕಾಯಿತು. ಸುಮ್ಮನೆ ನಡುಗುತ್ತ, ಚಳಿಯಿಂದಲೋ ಭಯದಿಂದಲೋ ಗೊತ್ತಿಲ್ಲದೇ, ತನ್ನ ಮಂಚದ ಮೇಲೆ ಚಾದರವನ್ನೂ ಹೊಚ್ಚಿಕೊಳ್ಳದೆ ಮಲಗಿಕೊಂಡ.

ಧಿಡೀರನೆ ಎಚ್ಚರವಾಯಿತು. ಬಾಯಿಯಿಂದ ಉಫ್ಫ್ ಎಂದು ಅನೈಚ್ಛಿಕ ಶಬ್ದ ಬಂದಂತೆ ಅನಿಸಿತು. ತಾನೇ ಬಡಬಡಿಸಿ ಹುಶ್ ಅಂತ ಅಂದಿರಬಹುದು. ತಕ್ಷಣ ಸಂಕೋಚ, ಭಯ, ತನ್ನ ಮೇಲೆಯೇ ಸಿಟ್ಟು ಎಲ್ಲ ಉಂಟಾದವು. ತನ್ನ ಮಕ್ಕಳು ಕನವರಿಸಿದಾಗ ಬೆಳಿಗ್ಗೆ ಅದನ್ನೇ ನೆಪ ಮಾಡಿ ಅವರನ್ನು ಕೀಟಲೆ ಮಾಡಿದ್ದು ನೆನಪಾಗಿ ಅವರಿಗೆ ಇದು ಗೊತ್ತಾದರೆ ಬಹುಶಃ ಅವರೂ ತನ್ನ ತಮಾಷೆ ಮಾಡಬಹುದು ಎಂದು ಯೋಚಿಸಿ ಸಣ್ಣ ಮುಗುಳ್ನಗೆಯೂ ಹಾಯಿತು. ಎದ್ದು ಬಾಥ್ ರೂಂ ಗೆ ಹೋಗಿಬಂದು ನೀರು ಕುಡಿದು ಮತ್ತೆ ಮಲಗಿದ. ಇದಕ್ಕಿಂತ ಮುಂಚೆ ಕಂಡಿದ್ದು ಕನಸೇ ಅದು? ಕನಸೇ ಇರಬಹುದು. ಯಾಕಿಂಥ ಕನಸು? ಯಾಕೀ ಭಯ? ಎಂಥಾ ವಿಚಿತ್ರವಾದ ಭಾವನೆಗಳು? ಬೆಳಿಗ್ಗೆ ಎದ್ದು ಇದರ ಬಗ್ಗೆ ಕಥೆ ಬರೀಬೇಕು ಎನ್ನುತ್ತಲೇ ನಿದ್ರೆ ಹೋದ.


ಗಂಟೆ ಸುಮಾರು ಹನ್ನೊಂದಾಗಿರಬಹುದು. ಆಫೀಸ್ ಗೆ ಇವತ್ತು ಬರುವದಿಲ್ಲ ಎಂದು ಸೆಕ್ರೆಟರಿಗೆ ಬೆಳಿಗ್ಗೆ ಯಾವಾಗಲೋ ಎಚ್ಚರವಾದಾಗ ಒಮ್ಮೆ sms ಕಳುಹಿಸಿ ಆಗಿತ್ತು. ಆಗಾಗ್ಗೆ ಕಸ್ಟಮರ್ ಗಳ ಫೋನ್ ನಿಂದಾಗಿ ಗುಂಯ್ಯಿ ಗುಡುವ ಫೋನ್ ನಿಂದಾಗಿ ಪದೇ ಪದೇ ನಿದ್ರೆ ಕೆಡುತ್ತಿತ್ತು. ಒಂದೇ ಕಡೆ ಕಿವುಚಿ ಮಲಗಿಕೊಂಡಿದ್ದರಿಂದ ಭುಜ ಒಂದೇ ಸಮನೆ ನೋಯುತ್ತಿತ್ತು. ಹಸಿವೆ, ಟ್ರೆಕಿಂಗ್ ನಿಂದಾದ ಆಯಾಸದಿಂದ ತಲೆ ಭಾರವಾಗಿತ್ತು. ತಲೆಯಲ್ಲಿ ಮಾರ್ದನಿಸುವ ಗೆಳೆಯರ ಮಾತುಗಳು, ಜೋಕುಗಳು, ಹಾಡುಗಳು. ಇನ್ನು ಬಹಳ ಹೊತ್ತು ಮಲಗುವ ಹಾಗಿಲ್ಲ ಎಂದು ಮೇಲೆದ್ದು ಸ್ನಾನ ಮಾಡಲು ಬಚ್ಚಲುಮನೆಗೆ ಹೋದ. ಸ್ನಾನ ಮಾಡ್ತಾ ಮಾಡ್ತಾ ಮತ್ತೆ ಅದೇ ಯೊಚನೆ. ಅದೆಂಥ ಕನಸದು? ಯಾರಿರಬಹುದು ಆ ಮುದುಕ? ಯಾಕೆ ಅವನು ನನಗಿಂತ ವೇಗವಾಗಿ ನಡೆಯುತ್ತಿದ್ದ? ಆದವನಿಗೆ ಹೇಗೆ ಸಾಧ್ಯವಾಗಿರಬಹುದು? ನನ್ನ ಮನೆ ನಿಜಕ್ಕೂ ಬದಲಾಗಿದೆಯೇ? ಅಯ್ಯೋ ಸ್ನಾನ ಮಾಡುವ ಮುಂಚೆ ಮತ್ತೆ ಒಂದ್ಸಲ ಹೊರಗಡೆ ಹಾಲ್ ನಲ್ಲಿ ಹೋಗಿ ತಾನು ನೋಡಬಾರದಿತ್ತೆ? ಎಂಥ ಮೂರ್ಖ ತಾನು ಎಂದು ಮನಸ್ಸಲ್ಲೇ ತನ್ನನ್ನು ತಾನೇ ಶಪಿಸಿದ.

ಢಗ್ ಢಗ್... ಯಾರೋ ಬಾಥ್ ರೂಮಿನ ಕದ ತಟ್ಟುತ್ತಿದ್ದಾರೆ. ಇವತ್ತು ಸೋಮವಾರ, ಇವಳು ಆಗಲೇ ಸ್ಕೂಲ್ ಗೆ ಹೊಗಿರಬಹುದಲ್ಲ? ಈ ಹೊತ್ತಿನಲ್ಲಿ ಯಾಕಿವಳಿನ್ನೂ ಮನೇಲೆ ಇದ್ದಾಳೆ? ಆರಾಮವಾಗಿ ಸ್ನಾನ ಕೂಡ ಮಾಡಲಿಕ್ಕೆ ಬಿಡಲ್ಲವಲ್ಲ ಎಂದುಕೊಳ್ಳುತ್ತ "ಏನೇ" ಎಂದು ಬಾಗಿಲು ತೆಗೆಯದೇ ಕೂಗಿದ. "ಯಾಕ್ರೀ ಇಷ್ಟೊತ್ತಿನಲ್ಲಿ ಸ್ನಾನ ಮಾಡ್ತಿದ್ದೀರ? ಬೆಳಿಗ್ಗೆ ಮೈ ಹುಷಾರು ಬೇರೆ ಇಲ್ಲ ಅಂದ್ರಿ, ಜ್ವರ ಏನಾದರೂ ಜಾಸ್ತಿ ಆಗಿದೆಯಾ? " ಆ ಕಡೆಯಿಂದ ಧ್ವನಿ ಬಂದಿತು. "what nonsense ?" ಮತ್ತೆ ಢಗ್ ಢಗ್... ಬಾಗಿಲು ಬಡಿಯುವದು ನಿಲ್ಲುತ್ತಲೇ ಇಲ್ಲ. ಬೇಗ ಬೇಗ ಸ್ನಾನ ಮುಗಿಸಿ ಮೈ ಒರೆಸಿಕೊಂಡು ಹೊರ ಬಂದ. ಮುಂದೆ ಹೆಂಡತಿ, ಅಮ್ಮ ನಿಂತಿದ್ದಾರೆ. "ಯಾಕೋ, ಏನಾಯ್ತೋ ನಿನಗೆ ಧಾಡಿ? ಈ ಹೊತ್ತಿನಲ್ಲಿ ಯಾಕೆ ಸ್ನಾನ ಮಾಡ್ತಿದ್ದೀಯೋ?" ಎಂದರು ಅಮ್ಮ. "ಈ ಹೊತ್ತಿನಲ್ಲಿ? ಎಷ್ಟಾಗಿದೆ ಈಗ ಟೈಮು?" ತಲೆ ಒರೆಸಿಕೊಳ್ಳುತ್ತಾ ಈತ ಕೇಳಿದ. "ಬೆಳಿಗ್ಗಿನ ನಾಲ್ಕು ಗಂಟೆ" ಅವಳಂದಳು. ಇವನಿಗೆ ಮೂರ್ಛೆ ಹೋಗುವುದೊಂದೇ ಬಾಕಿ.

ಬಾಕಿ ಏನು, ಹೋದನೇ ಅನ್ನಿಸುತ್ತೆ. ಎಚ್ಚರವಾಗಿ ನೋಡಿದಾಗ ಅಕ್ಕ ಪಕ್ಕದವರು, ತನ್ನ ಟ್ರೆಕಿಂಗ್ ಸ್ನೇಹಿತರು, ನೆರೆಯದ ಡಾಕ್ಟರು, ಒಬ್ಬಿಬ್ಬ ಸೆಕ್ಯೂರಿಟಿ ಗಾರ್ಡ್ ಗಳು ತನ್ನ ಸುತ್ತ ಸೇರಿದ್ದಾರೆ. "ಏನಾಯಿತು ನನಗೆ, ಯಾಕೆ ಹೀಗೆಲ್ಲ ಇಲ್ಲಿ ಸೇರಿದ್ದೀರ?" ಇವನ ಧ್ವನಿ ಕ್ಷೀಣವಾಗಿತ್ತು. "ಸ್ವಲ್ಪ ಹೊತ್ತಿನ ಮುಂಚೆ ಸಾರ್ ಸ್ವಿಮ್ಮಿಂಗ್ ಪೂಲ್ ಕಡೆ ಬಂದಿದ್ದರು" ಎಂದ ಒಬ್ಬ ವಯಸ್ಸಾದ ಗಾರ್ಡ್. "ಮೇಲೆ ಕೆಳಗೆ ಓಡಾಡ್ತಾ ಒಬ್ಬರೇಯಾರಿಗೋ ಕೈ ಮಾಡ್ತಾ ಇದ್ದರು, ಕ್ಲಬ್ ಹೌಸ್ ನ ಕನ್ನಡಿ ದಿಟ್ಟಿಸಿ ನೋಡುತ್ತಾ ಏನೇನೋ ಗೊಣಗುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಓಡುವ ಹಾಗೆ ನಿಂತಲ್ಲೇ ಕುಣಿಯ ಹತ್ತಿದ್ದರು, ನಾನು ಹತ್ತಿರಕ್ಕೆ ಹೋಗಿ ಮಾತಾಡಿಸೋಣ ಅಂದರೆ ದೂರದಿಂದಲೇ ನನಗೆ ಕೈ ಮಾಡಿ ಹೆದರಿರುವ ಥರ ವರ್ತಿಸಿದರು. ನನಗೂ ಭಯವಾಯ್ತು, ಅಲ್ಲಿಂದ ಓಡಿ ಹೋಗಿ ನಮ್ಮ ಬಾಸ್ ಗೆ ಎಬ್ಬಿಸಿದೆ" ಅವನ ಮುಖ ಇವನು ದಿಟ್ಟಿಸಿ ನೋಡಿದ. ಹೌದು. ನಿಸ್ಸಂಶಯವಾಗಿ ಅವನೇ, ಆ ಮುದುಕನೇ. ಎಲ ಇವನಾ, ನಾನು ಕನಸು ಅಂದುಕೊಂಡಿದ್ದು ಕನಸಲ್ಲವೇ ಎಂದು ಅಚ್ಚರಿ ಆಯಿತು. ಹಾಗಿದ್ದರೆ ಆ ಬಸ್ಸು ಪ್ರಯಾಣ, ಆ ಟ್ರೆಕ್ಕಿಂಗು, ಆ ನದಿ, ಮಧ್ಯ ರಾತ್ರಿ? ದೆವ್ವಗಳೋ, ದೇವರೋ ಹೇಗಿರುತ್ತಾರೆ ನೋಡಿಯೇ ಬಿಡೋಣ ಎಂದು ಗಟ್ಟಿ ಮನಸ್ಸು ಮಾಡಿ ಹೊರಗಡೆ ಹೋಗಿದ್ದು?

ಆವಾಗ ಸ್ನೇಹಿತರಲ್ಲೊಬ್ಬ, "ಯಾಕೋ, ಏನಾಯಿತೋ, ಮೊನ್ನೆ ತಾನೇ ಚೆನ್ನಾಗಿದ್ದೆ, ಮೈ ಹುಷಾರಿಲ್ವಾ? ಎಲ್ಲ ಸೇರಿ ಇವತ್ತು ಟ್ರೆಕ್ಕಿಂಗ್ ಹೋಗೋಣ ಅಂತ ನೀನೆ ಎಲ್ಲರಿಗೂ ಹೇಳಿದ್ದೆಯಲ್ಲ? ನೀನು ಹೀಗೆ ಜ್ವರ ಬಂದು ಮಲಗಿದರೆ ಟ್ರೆಕ್ಕಿಂಗ್ ಆದಂತೆಯೇ" ಎಂದು ತಮಾಷೆ ಮಾಡಿದರೆ ಆ ಹೊತ್ತಿನ ಗಾಂಭೀರ್ಯ ಕಡಿಮೆಯಾಗಬಹುದೆಂದು ಹಲ್ಲು ಕಿರಿದ. "ಅರೆ, ಏನೋ ಹೀಗೆ ಹೇಳ್ತಿದೀಯಾ? ಇವತ್ತು ಬೆಳಿಗ್ಗೆ ತಾನೇ ಟ್ರೆಕ್ಕಿಂಗ್ ಮುಗಿಸಿ ನಾವೆಲ್ಲಾ ಬಂದ್ವಲ್ಲೋ? ತಮಾಷೆ ಮಾಡ್ತಾ ಇದ್ದೀರಾ ನೀವೆಲ್ಲ ಸೇರ್ಕೊಂಡು?" ಏಳಲು ಪ್ರಯತ್ನ ಪಡುತ್ತ ಇವನೆಂದ. "ಯಾಕೇ, ನೀನೂ ಗರಬಡಿದವರ ಥರ ಹೀಗೆ ನಿಂತು ಬಿಟ್ಟಿದ್ದೀಯಾ, ಬೆಳಿಗ್ಗೆ ನಾನು ನಿಮಗೆಲ್ಲ ಬೈದು ಕೋಪಿಸಿಕೊಂಡು ಹೊರಗೆ ಹೋಗಿದ್ದು ಮರೆತೇ ಬಿಟ್ಟ್ಯಾ, ಇದು ನೋಡು, ಈ ಗೋಡೆಯಿಂದಲೇ ಆದದ್ದು ಇದೆಲ್ಲ, ಯಾಕೆ ಕಟ್ಟಿಸಿದೆ ಈ ಗೋಡೆ?" ಎದ್ದು ಆಕಡೆ ನೋಡದೆ ಅತ್ತ ಕೈ ತೋರಿಸಿದ. ಅವರೆಲ್ಲ ಒಮ್ಮೆ ಅವನು ಕೈ ತೋರಿಸಿದ ಕಡೆ, ಒಮ್ಮೆ ಇವನ ಕಡೆ ನೋಡಹತ್ತಿದರು. ಎಲ್ಲರ ಮುಖದ ಮೇಲೆ ಏನೋ ಒಂಥರಾ ಭಯ, ಕಳವಳ ಕಂಡು ತಾನೂ ಈಕಡೆ ನೋಡಿದ. ಅಲ್ಲಿ ಯಾವ ಗೋಡೆಯೂ ಇರಲಿಲ್ಲ. ತನ್ನವೇ ಹಳೆಯ ಫೋಟೋಗಳಿದ್ದವು. ಅದೇ ರೂಮು, ಅದೇ ಆಕಾರ. ಗೋಡೆ ಎಲ್ಲಿಂದ ಮೂಡಿತ್ತೋ ತಿಳಿಯಲಿಲ್ಲ. ಎಲ್ಲರಿಗೂ ಕೈ ಜೋಡಿಸಿ ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿಕೊಂಡ.



2 comments:

  1. omg! sankeerNa... ishTavaytu. thrilling too...
    - CheT

    ReplyDelete
  2. Sahi storyline thaa.. Interesting read..

    ReplyDelete