The story of going inwards, can not be written in words. -VV
ವಯಸ್ಸು ಮೂವತ್ತೆಂಟು. ಒಳ್ಳೆಯ ನೌಕರಿ, ಪ್ರತಿಷ್ಠಿತ ಹುದ್ದೆ, ವಿದೇಶದಲ್ಲೂ ಸೇರಿಸಿ ತನ್ನ ಹದಿನೇಳು ವರುಷದ ಕೆಲಸದಲ್ಲಿ ಸಾಕಷ್ಟು ಹಣ ಗಳಿಸಿಯೂ ಆಗಿತ್ತು. ಸುಶೀಲ ಹೆಂಡತಿ, ಎರಡು ಮುದ್ದಾದ ಹೆಣ್ಣು ಮಕ್ಕಳು, ಒಟ್ಟಿನಲ್ಲಿ ಸುಖಿ ಸಂಸಾರ ಅವನದು. ಹೊರಗಿನಿಂದ ನೋಡಿದವರಿಗೆ ಯಾವದೇ ಕೊರತೆ ಕಾಣದಿರುವಂತಹ, ಕೆಲವಬ್ಬರು ಹೊಟ್ಟೆ ಕಿಚ್ಚು ಪಡುವಂತಹ ಜೀವನ ರಾಜೀವನದು. ಆದರೂ ಏನೋ ಕೊರತೆ. ಒಳಗೊಳಗೇ ಸೆಲ್ಫ ಪಿಟಿ ಮಾಡಿಕೊಳ್ಳುವ ಸ್ಯಾಡಿಸಂ. ಎಲ್ಲದರಲ್ಲೂ ದಾರ್ಶನಿಕ ಸಿಧ್ಧಾಂತ ಕಂಡುಕೊಳ್ಳುವ ವಿಚಿತ್ರ ಹುಕ್ಕಿ. ದಿನನಿತ್ಯದ ಆಗು ಹೋಗುಗಳ ಕಾರಣ ಮತ್ತು ಪರಿಣಾಮಗಳ ಬುಡಕ್ಕೆ ಹೋಗುವಹುಚ್ಚು. ತನ್ನ ಮೇಲೆ ತನಗಿರುವ ಹುಂಬ ಆತ್ಮವಿಶ್ವಾಸ. ಇದೆಲ್ಲರ ಪರಿಣಾಮವಾಗಿಯೋ ಏನೋ, ಆಗಾಗ್ಗೆ ಜಗತ್ತಿನ ಇರುವಿಕೆ, ಸತ್ಯ-ಮಿಥ್ಯ ದ ಬಗೆಗಿನ ಗೊಂದಲ. ಮಿಡ್ ಲೈಫ್ ಕ್ರೈಸಿಸ್ ನ ಪರಮಾವಧಿ.
ಈ ನಡುವೆ ಸ್ವಂತಕ್ಕೆ ಖುಷಿ ಕೊಡುವ ಎಲ್ಲಾ ಚಟುವಟಿಕೆಗಳನ್ನೂ ಶುರುಮಾಡಿಯಾಗಿತ್ತು. ಯಾವ ನೌಕರಿ, ಸಂಸಾರದ ನೆಪದಲ್ಲಿ ಇಷ್ಟು ವರುಷ ತನ್ನ ಆಸಕ್ತಿಗಳನ್ನು ಪಕ್ಕಕ್ಕಿಡುತ್ತಾ ಬಂದಿದ್ದನೋ ಅವುಗಳನ್ನೆಲ್ಲ, ತನ್ನ ವಯಸ್ಸು ಮತ್ತು ಸಾಮರ್ಥ್ಯಕ್ಕನುಗುಣವಾಗಿ ಒಂದೊಂದಾಗಿ ಮಾಡುತ್ತಾ ಬಂದಿದ್ದ. ಲೈಫ್ ಬಿಗಿನ್ಸ್ ಆಟ್ ಫಾರ್ಟಿ ಎನ್ನುವಂತೆ ಇಷ್ಟು ವರುಷ ಮಾಡದೆ ಇರುವಂಥ ಎಲ್ಲವನ್ನು ಮಾಡಿ ನೋಡುವ ಹುಮ್ಮಸ್ಸು ಹೊಕ್ಕಿತ್ತವನಿಗೆ. ಆದರೆ ಅದಕ್ಕೂ ಮಿತಿಯಿತ್ತು. ಮಾಡುತ್ತಾ ಮಾಡುತ್ತಾ ಕೊನೆಗೆ ಅವಕ್ಕೂ ಬೇಸತ್ತ. ಇನ್ನು ಉಳಿದಿರುವುದೊಂದೇ, ಯಾವ ವಯಸ್ಸಿನಲ್ಲಿ ಏನೇನು ಆಗಬೇಕೋ ಅದಾಗಬೇಕು ಎಂದುಕೊಂಡು ಅದರ ಹತ್ತಿರಕ್ಕೂ ಹೋಗದೇ ಇದ್ದ ಒಂದು ಸಂಗತಿ ಎಂದರೆ ಆಧ್ಯಾತ್ಮ. ಆಧ್ಯಾತ್ಮ, ದೇವರು-ದಿಂಡರುಗಳಿಗೆ ಹತ್ತಿರವಾದುದ್ದೇನೋ ಎಂದು ಅದರಿಂದ ಅರ್ಧಂಬರ್ಧ ನಾಸ್ತಿಕನಾದ ಇವನು ದೂರವೇ ಇದ್ದ. ಜಾಸ್ತಿ ಅದರ ಬಗ್ಗೆ ಯೋಚನೆಯಾಗಲಿ, ಆಸಕ್ತಿ ತೋರಿಸುವದಾಗಲಿ ಮಾಡಿರಲಿಲ್ಲ. ಆದರೆ ಇತ್ತೀಚಿಗೆ ಜೀವನದ ಬಗ್ಗೆ ಜುಗುಪ್ಸೆಗೆ ಹತ್ತಿರವಾದ ಭಾವನೆಗಳು ಬರತೊಡಗಿದ್ದರಿಂದ ಅವನ ಮನಸ್ಸು ಆಧ್ಯಾತ್ಮದತ್ತ ವಾಲಿತ್ತು.
ಬರ ಬರುತ್ತಾ ಅವರವರ ಸಿಧ್ಧಾಂತಗಳಿಗೆ ಸಂಪೂರ್ಣವಾಗಿ ಒಪ್ಪದೇ ಹೋದರೂ ರಾಜೀವ ಸುಮಾರು ಆಧ್ಯಾತ್ಮಿಕ ಗುರುಗಳ ಪುಸ್ತಕಗಳನ್ನ ಓದುತ್ತಾ ಬಂದಿದ್ದ. ದಿನಾಲೂ ಅವನ ದಿನಚರಿಯಯ ಪ್ರಕಾರ ತಾಯಿಯ ಮೇಲಿನ ಗೌರವಕ್ಕಾಗಿ ಮಾತ್ರ ಮಾಡಿಕೊಂಡ ರೂಢಿಯಂತೆ ಸ್ನಾನವಾದ ತಕ್ಷಣ ದೇವರಿಗೆ ನಮಸ್ಕಾg ಮಾಡುವ ಬದಲು ಬೆಡ್‌ರೂಂ ಗೆ ಹೋಗಿ ಯೂ ಟ್ಯೂಬ್ ಹಾಕಿಕೊಂಡು, ಆಫೀಸಿಗೆ ರೆಡಿ ಅಗುತ್ತಾ ಅನೇಕ ಆಧ್ಯಾತ್ಮಿಕ ಪ್ರವಚಗಳನ್ನುಕಿವಿಯ ಮೇಲೆ ಬೀಳಿಸಿಕೊಳ್ಳಲು ಶುರುಮಾಡಿದ್ದ.ತಾನು ಇಷ್ಟು ದಿನ ಕಲಿತಿದ್ದದ್ದಕ್ಕೆ ಸಂಪೂರ್ಣವಾಗಿ ವಿರುಧ್ಧವಾದ ವಿಚಾರಸರಣಿಗಳು ಅವನ ತಲೆಯಲ್ಲಿ ಗುಂಯ್ಯಿಗುಡುತ್ತಿದ್ದವು. ಅದು ಹಾಗಿರದೇ ಹೋದರೆ ಹೀಗೇಕಿದೆ, ಹೀಗಿದೆ ಅಂದುಕೊಂಡಿದ್ದೆಲ್ಲಾ ಹಾಗಿದೆಯಲ್ಲ, ನಿರ್ಲಿಪ್ತತೆಯೆಂದರೆ ವೈರಾಗ್ಯವೇ? ಹೀಗೆ ಕೇಳಿದ್ದಷ್ಟು ಇನ್ನಷ್ಟು ಗೊಂದಲ ಉಂಟಾಗುತಿತ್ತು. ಮೊದಲಿದ್ದ ಅರಿವೇ ಸುಳ್ಳು ಎನ್ನುಷ್ಟು ಹತಾಶೆಯ ಮನೋಭಾವ ಬರತೊಡಗಿತು. ಕೆಲವು ಜೀವನದ ಯಾವುದೇ ಸಂಗತಿಗಳ ಬಗ್ಗೆ ಸ್ಪಷ್ಟ ಧೋರಣೆಯಿಲ್ಲದ ಗೆಳೆಯರಿಂದ ತನ್ನ ಹೊಸ ಗೊಂದಲಗಳ ಕುರಿತಾಗಿ ಉಗಿಸಿಕೊಂಡದ್ದೂ ಆಗಿತ್ತು, ಅವರಿಗೆ ಮರಳಿ ಅಸ್ಪಷ್ಟವಾಗಿ ಉಗಿದಿದ್ದೂ ಆಗಿತ್ತು.
ಒಂದು ದಿವಸ ಹೀಗೇ ಯೂ ಟ್ಯೂಬ್ ನಲ್ಲಿ ಹುಡುಕುತ್ತಾ ಇದ್ದಾಗ ಶಿವಗುರು ಎಂಬ ಒಬ್ಬರ ವಿಡಿಯೋ ಗಳ ಮೇಲೆ ಕಣ್ಣು ಹೋಯಿತು. ಆದಿನ ಆ ಗುರುಗಳ ಒಂದೆರಡು ವಿಡಿಯೋ ನೋಡಿದ. ಮಾಮೂಲಿನ ದಿನ ಕಳೆಯಬೇಕಾದರೆ ಅದೇಕೋ ಆ ಶಿವಗುರುಗಳ ಮುಖವೇ ಕಣ್ಣೆದುರಿಗೆ ಬಂದು ನಿಂತಂತಾಗುತಿತ್ತು. ಇಷ್ಟು ದಿನ ಹಲವು ತತ್ವಗಳನ್ನು ಕೇಳಿದ್ದಕ್ಕೂ ಇರಬಹುದು ಇವರ ವಿಚಾರಗಳು ಒಮ್ಮೆಲೇ ವಿರೋಧಾಭಾಸವಾಗೇನೂ ಕಾಣಲಿಲ್ಲ. ಬದಲಿಗೆ ಏನೋ ಒಂಥರಾ ಆಕರ್ಷಣೀಯವಾಗಿ ಕಂಡವು. ಅವರಲ್ಲೇನೋ ಇದೆ ಎಂದು ಅವನಿಗೆ ಭಾಸವಾಗಲು ಜಾಸ್ತಿ ಹೊತ್ತು ಬೇಕಾಗಲಿಲ್ಲ. ಮಾರನೇ ದಿನವೂ ಅವರ ಸಂವಾದವನ್ನೇ ಹಾಕಿಕೊಂಡು ಕೇಳಿದ. ಅದರ ಮಾರನೇ ದಿನವೂ. ಹೀಗೇ ಒಂದು ವಾರದಲ್ಲಿ ಶಿವಗುರು ಅವರ ಸುಮಾರು ಇಪ್ಪತ್ತಿಪ್ಪತ್ತೈದು ವಿಡಿಯೋಗಳನ್ನ ನೋಡಿದ. ಕಲಿಯಬೇಕಾಗಿದ್ದು ತುಂಬಾ ಇದೆ ಅನಿಸತೊಡಗಿತ್ತು. ಗೊಂದಲಗಳು ಕರಗಿ ಸ್ಪಷ್ಟತೆ ಮೂಡ ತೊಡಗಿತ್ತು, ತನಗೇನೂ ಸ್ಪಷ್ಟತೆ ಇಲ್ಲದರ ಬಗ್ಗೆ! ಅರಿವು ಮಾತ್ರ ನಿಜ, ನಂಬಿದ್ದೆಲ್ಲ ಸುಳ್ಳು ಎಂದರವರು ಶಿವಗುರು. ಹಾಗಾಗಿ ಇಷ್ಟು ದಿನಗಳ ತನ್ನ ನಂಬಿಕೆಗಳ ಮೇಲೆಯೇ ನಂಬಿಕೆ ಹಾರ ತೊಡಗಿತ್ತು.
ಈ ಮಧ್ಯೆ ಕಥೆ ಕಾದಂಬರಿ ಬರೆಯುವ ಹುಚ್ಚೂ ಅವನ ತಲೆಯಲ್ಲಿ ಹೊಕ್ಕಿತ್ತು. ಯಾವಾಗಲೂ ತಾನು ಎಂದೂ ಬರೆಯದೇ ಇರುವ ಕಥೆಗೆ ಏನಾದರೂ ಒಂದು ಹೊಸ ವಸ್ತು ಸಿಗುತ್ತದೋ ಎಂದು ನೋಡುತ್ತಲೇ ಇರುತ್ತಿದ್ದ. ಮೊದಲೇ ಊಹಾ ಪ್ರಪಂಚಕ್ಕೆ ಕಿರೀಟವಿರದ ಅಧಿಪತಿ, ಮಿಡ್ ಲೈಫ್ ಕ್ರೈಸಿಸ್ ನಲ್ಲಿ ಬಿಡ್ತಾನೆಯೇ? ಸರಿ, ಯಾವಾಗ ನೋಡಿದಾಗ ಅವನಿಗಿರುವ ಕೆಲಸ ಎರಡೇ, ಒಂದು, ತಾನು ನೋಡಿದ್ದೆಲ್ಲವನ್ನು ಆಧ್ಯಾತ್ಮಿಕ ಮಾಪಕದಲ್ಲಿ ಅಳೆಯುವದು. ಅದು ತನ್ನ ಕಥೆಯ ವಸ್ತುವಾಗುತ್ತದಾ ಅಂದು ನೋಡುವದು ಇನ್ನೊಂದು. ಶಿವಗುರುಗಳ ಪ್ರತಿ ಮಾತಿನಲ್ಲಿಯೂ ಅವರೇ ಅರ್ಥ ಹುಡುಕಬಾರದೆಂದು ಹೇಳಿದ್ದರೂ ಅರ್ಥ ಹುಡುಕಲಿಕ್ಕೆ ಶುರು ಮಾಡಿದ. ಅವರ ಜೀವನದ ಬಗ್ಗೆ ಜಾಸ್ತಿ ಮಾಹಿತಿಗಳನ್ನ ಸಂಗ್ರಹಿಸತೊಡಗಿದ. ಯಾರನ್ನೇ ಆಗಲಿ ಸಂಪೂರ್ಣವಾಗಿ ನಂಬಲಿಕ್ಕೂ ಮುನ್ನ ಅವರ ಬಗ್ಗೆ ಕೂಲಂಕುಷವಾಗಿ ಅಭ್ಯಾಸಿಸುವದು ಅವನಿಗೆ ಚಿಕ್ಕಂದಿನಿಂದಲೇ ಬಂದಿದ್ದ ಚಟ. ಅದೇ ಚಟವನ್ನು ಮುಂದುವರೆಸುತ್ತಾ ಶಿವಗುರುಗಳ ಬಗ್ಗೆ ಸಿಕ್ಕಷ್ಟು ಮಾಹಿತಿಗಳಿಸುತ್ತಾ ಹೋದ. ಒಂದು ಹಂತದಲ್ಲಿ ಅವರ ಬಗ್ಗೆ ಮಾಹಿತಿಗಳಿಸುವದೇ ಅವರು ಪ್ರಸ್ತಾಪಿಸುವ ಆಧ್ಯಾತ್ಮಕ್ಕಿಂತಲೂ ಮಹತ್ವಪೂರ್ಣವಾಗತೊಡಗಿತು. ಆದರೂ ಅವರ ಮೇಲಿನ ಆಕರ್ಷಣೆ ಕಡಿಮೆಯೇನೂ ಆಗಲಿಲ್ಲ.
ಹೀಗೊಂದು ದಿನ ಆಫೀಸಿನಲ್ಲಿ ಜಾಸ್ತಿ ಕೆಲಸ ಇರದಿದ್ದಾಗೊಂದು ಸಲ ಶಿವಗುರುಗಳ ವೆಬ್‌ಸೈಟ್ ಗೆ ಧಿಡೀರನೆ ಭೇಟಿಯಿತ್ತ. ಇಷ್ಟು ದಿವಸ ಅದರ ಬಗ್ಗೆ ಅವನಿಗೆ ಹೇಗೆ ಹೊಳೆದಿರಲಿಲ್ಲವೋ ಅವನಿಗೇ ಗೊತ್ತಿರಲಿಲ್ಲ. ಒಮ್ಮೆಲೇ ಅವನಿಗೆ ಶಿವಗುರುಗಳನ್ನು ನೋಡಲೇಬೇಕು ಎಂಬ ಉತ್ಕಟ ಆಸೆ ಆಯಿತು. ಆ ಆಸೆ ಅವನಿಗೆ ಬಂದಿದ್ದು ಶಿವಗುರುಗಳ ಮೇಲಿನ ಭಕ್ತಿಗಾಗಿ ಬಂದಿದ್ದೋ ಅಥವಾ ಅವರ ಮೇಲಿನ ಸಂಶಯ ಪರಿಹಾರದ ಉದ್ದೇಶಕ್ಕೋಸ್ಕರ ಬಂದಿದ್ದೋ ಅವನಿಗೂ ಹೊಳೆಯಲಿಲ್ಲ. ಅಂತೂ ಅವರ ವೆಬ್ ಸೈಟ್ ನೋಡುತ್ತಾ ಹೋದ ಹಾಗೆ ಹೊಸ ಹೊಸ ಸಂಗತಿಗಳು ಕಾಣುತ್ತಾ ಬಂದವು. ಶಿವಗುರುಗಳು ತಾನು ಎಣಿಸಿದಷ್ಟು ಸಣ್ಣ ಪ್ರಮಾಣದವರು ಅಲ್ಲವಂತಲೂ, ಅವರನ್ನು ಭೇಟಿ ಮಾಡುವದು ಅಷ್ಟು ಸುಲಭವಲ್ಲದಿರುವದೂ ಗೊತ್ತಾಯಿತು. ಅವರ ವೇಳಾಪಟ್ಟಿ ನೋಡಿದಾಗ ಅವರು ಏರ್ಪಡಿಸಿರುವ ಒಂದು ಕಾರ್ಯಕ್ರಮ ಕಂಡಿತು. ಆದರೆ ಆ ಕಾರ್ಯಕ್ರಮ ಮುಂದುವರೆದ ಮಟ್ಟದ್ದು ಇದ್ದುದಾದರಿಂದ ಅದರಲ್ಲಿ ಭಾಗವಹಿಸಲು ಕನಿಷ್ಠ ಒಂದಾದರೂ basic program ಅನ್ನು ಪೂರೈಸಿರಬೇಕಾಗಿದ್ದು ಅವಶ್ಯವಾಗಿತ್ತು. ಅವರನ್ನು ನೋಡುವ ಆಸೆ ಎಷ್ಟು ಜಾಸ್ತಿಯಾಗಿತ್ತೆಂದರೆ ಶಿವಗುರು ಅವರ ಸಂಸ್ಥೆ ಸಾಮಾನ್ಯ ಜನರಿಗಾಗಿ ಏರ್ಪಡಿಸುವ course ಗಳನ್ನು ಗಮನಿಸುತ್ತಾ ಹೋದ. ನಿಮ್ಮನ್ನು ನೀವೇ ಅರಿಯಿರಿ ಎಂಬ ಮೊದಲ ಹಂತದ course ಅದು. ಆ course ನಡೆಯುವ ಜಾಗ, ದಿನಾಂಕಗಳನ್ನು ಪರಿಶೀಲಿಸುತ್ತಾ ಬಂದ. ಚಂಡೀಗಢ... ದೆಹಲಿ... ಇತ್ಯಾದಿ... ಕೆಳಗೆ ನೋಡುತ್ತಾ ಬಂದ. ಹಾಂ! ಅಲ್ಲಿತ್ತು ಬೆಂಗಳೂರು! ಅವನ ತಲೆಯಲ್ಲೀಗಾಗಲೇ ಹಲವಾರು ಯೋಚನೆಗಳು ಬರತೊಡಗಿದ್ದವು. ತಾನೇನೋ ಈ course ಮಾಡಲು ಸಿಧ್ಧನಾಗಿದ್ದೇನೆ, ಆದರೆ ಬೆಂಗಳೂರಲ್ಲಿ ಆ ತರಬೇತಿ ನಡೆಯುವ ಜಾಗ ದೂರವಿದ್ದರೆ ಏನು ಗತಿ? ಬೆಂಗಳೂರಿನ traffic ನಲ್ಲಿ ಎಲ್ಲೂ ಹೋಗಲು ಮನಸ್ಸಾಗದು. ಇಲ್ಲೇ ಎಲ್ಲೋ ಹತ್ತಿರವಿದ್ದರೂ ಅದರ ಶುಲ್ಕ ತುಂಬಾ ಜಾಸ್ತಿ ಇದ್ದರೆ? ದುಡ್ಡಿನ ಸಮಸ್ಯೆ ತನಗಿರದಿದ್ದರೂ ಸುಮ್ಮ ಸುಮ್ಮನೇ ಯಾವದೋ ಒಂದು ತಲೆಕೆಡಿಸುವ ವಿಷಯಕ್ಕೋಸ್ಕರ ಖರ್ಚು ಮಾಡುವ ಹುಚ್ಚುತನವಲ್ಲ ಅವನದು. ಫೀಜು ಕಡಿಮೆ ಇದ್ದರೆ ಮಾತ್ರ ನೋಡೋಣ ಎಂದು ಮನದಲ್ಲೇ ತಲೆಗೆ ಹೊಳೆದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಹೌದು, ಬೆಂಗಳೂರಲ್ಲಿ ಇದ್ದು, ದುಡ್ಡೂ ಕಡಿಮೆ ಇದ್ದುದೇ ನಿಜವಾದರೆ ತನಗೆ ಸಮಯವೂ ಸಾಧಿಸಬೇಕಲ್ಲಾ? ತನ್ನ ಬಿಡುವಿಲ್ಲದ ದಿನಚರಿಯಲ್ಲಿ ಇಂಥದೇನಾದರೂ ಬಂದರೆ ಸುಮಾರು ದಿನಗಳ ಮೊದಲೇ ಕಾರ್ಯಕ್ರಮ ಯೋಜಿಸಿ ಇಡಬೇಕಾಗುತಿತ್ತು. ಬೆಂಗಳೂರು... ಬೆಂಗಳೂರಲ್ಲಿ ಎಲ್ಲಿ? ... ಹಾಗೇ ನೋಡುತ್ತಾ ಬಂದಾಗ ಅವನು ತನ್ನ ಕಣ್ಣುಗಳನ್ನೇ ನಂಬದಾದ! ತನ್ನ ಆಫೀಸ್ ಪಕ್ಕದಲ್ಲಿನದೇ ಅಡ್ರೆಸ್ಸು!! ಇವನ ಆಫೀಸಿಗೆ ಬರೀ ಎರಡು ನಿಮಿಷದ ನಡಿಗೆಯ ಹಾದಿಯಲ್ಲಿತ್ತು ಆ course ನಡೆಯುವ ಜಾಗ. ಯಾವಾಗ? ಸರಿಯಾಗಿ ಬರೀ ಎರಡೇ ದಿನ ಬಿಟ್ಟು! ಅದರ ವೇಳಾಪಟ್ಟಿಯೂ ತನ್ನ ಆಫೀಸ್ ಮುಗಿದ ಮೇಲೆಯೇ ಇದೆ. ಏನೋ ಒಂದು ಸಮ್ಮೋಹನಕ್ಕೊಳಪಟ್ಟಿರುವನಂತೆ ಸಣ್ಣಗೆ ಕಂಪಿಸಿ ಹೋದ!
ಅದಾಗಿ ಅವನಿಗೆ ಚೇತರಿಸಿಕೊಳ್ಳಲು ಸ್ವಲ್ಪ ಹೊತ್ತೇ ಬೇಕಾಯಿತು. ಹೊರಗೆ ಹೋಗಿ ಸಿಗರೇಟು ಹಚ್ಚಿ ಯೋಚಿಸತೊಡಗಿದ. ತಾನು ಆಧ್ಯಾತ್ಮದತ್ತ ಒಲಿಯುವದಕ್ಕೂ, ಶಿವಗುರುಗಳ ಕಡೆಗೆ ಆಕರ್ಷಿತವಾಗುವದಕ್ಕೂ, ತಾನು ಅವರನ್ನು ಭೇಟಿಯಾಗಬಯಸುವದಕ್ಕೂ, ಅವರ ವೆಬ್ ಸೈಟ್ ನೋಡುವದಕ್ಕೂ, ಆ courseನಲ್ಲಿ ಭಾಗವಹಿಸ ಬಯಸುವದಕ್ಕೂ ಇತ್ಯಾದಿ ಇವೆಲ್ಲವಕ್ಕೂ ಮತ್ತು course ನಡೆಯುವ ಸ್ಥಳ ತನಗೆ ಇಷ್ಟು ಹತ್ತಿರವಿದ್ದು ಇನ್ನೆರಡೇ ದಿನಗಳಲ್ಲಿ ಶುರುವಾಗಲಿದ್ದದ್ದಕ್ಕೂ ಏನೋ ಕಾಕತಾಳೀಯತೆ ಇದೆ ಎಂಬಂತೆ ತೋರಿತು. ಅಥವಾ ಕಾಕತಾಳೀಯ ಹೌದೋ ಅಲ್ಲವೋ ಎಂದು ಇನ್ನೊಮ್ಮೆ ಮೈ ಕಂಪಿಸಿತು! ಒಟ್ಟಿನಲ್ಲಿ ಈ ವಿಷಯದಲ್ಲಿ ಏನೋ ಇದೆ ಎಂದಾದರೂ ಖಚಿತವಾಯಿತು. ಸಿಗರೇಟು ಎಸೆದು ಒಳಗೆ ಬಂದು ಕೂಡಲೆ ಆ course ನ ಮಾಹಿತಿ ಪ್ರಕಾರ ಅದರಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದ. ಆ ಕಡೆಯಿಂದ ಅಷ್ಟೇನೂ ಆಸಕ್ತಿ ಇರಲಾರದ ಹೆಣ್ಣು ಧ್ವನಿಯೊಂದು ಮಾತನಾಡಿತು. ಸಾಮಾನ್ಯವಾಗಿ ಹೆಣ್ಣಿನ ಧ್ವನಿಯೆಂದರೆ ಏನೋ ಒಂದು ಕುತೂಹಲ, ಮೈ ಜುಂ ಜುಂ ಇವನಿಗೆ. ಇರುವ ವಿಷಯಬಿಟ್ಟು ಇನ್ನೇನೋ ಮಾತಾಡುವ ಮಹಾ ಪ್ರಣಯವಿಲಾಸಿ. ಆದರೆ ಅವತ್ತೇನಾಯಿತೋ ಏನೋ ಸುಮ್ಮನೆ ಮಾಹಿತಿ ಕೇಳಿ ಫೋನಿಟ್ಟ. ಏನಿಲ್ಲ, ಆ course ಗಾಗಿ ಏನೂ ಮುಂಗಡವಾಗಿ ಹಣ ಕೊಟ್ಟು ಜಾಗ ಕಾಯ್ದಿಡಬೇಕಾಗಿಲ್ಲ, ಅವತ್ತಿನ ದಿನವೇ ಅಲ್ಲಿ ಹೋಗಿ ಹೆಸರು ನೋಂದಾಯಿಸಿದರೆ ಸಾಕೆಂದು ಆ ಕಡೆಯ ಹೆಣ್ಣು ಹೇಳಿತ್ತು. ಒಟ್ಟಿನಲ್ಲಿ ಪ್ರವೇಶಕ್ಕೆ ಅನುಮತಿ ಸಿಕ್ಕರೆ ಸರಿ, ಇಲ್ಲಾ ಯಾಕಷ್ಟೊಂದು ಅದಕ್ಕೋಸ್ಕರ ಹಾತೊರೆಯುವದು ಎಂದು ಮನಸ್ಸಿನಲ್ಲೇ ತನಗೆ ತಾನೆ ಸಮಧಾನ ಹೇಳಿಕೊಂಡ.
ಯಾವುದೇ ಸಣ್ಣ ವಿಷಯವಿರಲಿ, ದೊಡ್ಡ ವಿಷಯವಿರಲಿ, ಎಲ್ಲರ ಮುಂದೆ ಹೇಳಿಕೊಳ್ಳುವದು ಇವನ ರೂಢಿ. ಆದರೆ ಇಂಥ ವಿಷಯಗಳನ್ನು ತನ್ನ ಕೀಟಲೆ ಮಾಡುವ ಸ್ನೇಹಿತರಿಗೆ ಹೇಳುವದೆಂದರೆ ಹಾಸ್ಯಾಸ್ಪದಗೀಡಾಗಲಿಕ್ಕೆ ಬಲಿ ಯಾಗುವುದೇ ಅಂತ ಅರ್ಥ. ಆದರೆ ಇಂಥಾ ಕಾಕತಾಳೀಯತೆ? ಹೇಳದೇ ಇರುವ ಸೈರಣೆಯೂ ಇವನದಲ್ಲ. ಏನೇ ಇರಲಿ, ಹೆಂಡತಿಗಂತೂ ಹೇಳುವ ವಿಷಯ ಖಂಡಿತಾ ಅಲ್ಲ! ಅಂತೂ ತನ್ನೊಳಗೇ ವಿಷಯ ಇಟ್ಟುಕೊಂಡು ಆ ದಿನಕ್ಕಾಗಿ ಕಾಯತೊಡಗಿದ.
ಕೊನೆಗೂ ಆ ದಿನ ಬಂದೇ ಬಿಟ್ಟಿತು. ಅವತ್ತು ಸಾಯಂಕಾಲ ಆಫೀಸ್ ಮುಗಿಸಿಕೊಂಡು ಹೇಗೂ ತನ್ನ ಆಫೀಸ್ ಪಕ್ಕದಲ್ಲೇ ಇತ್ತಲ್ಲ, ಆ course ನಡೆಯುವ ಜಾಗಕ್ಕೆ ಹೋದ. ಮೊದಲಿನ ಒಂದೂವರೆ ಗಂಟೆಗಳ ಪರಿಚಯದ ನಂತರ ಹೆಸರು ನೋಂದಾಯಿಸಲು ಅವಕಾಶ ಕೊಟ್ಟರು. ಇವನು ಯಂತ್ರಮಾನವನ ಥರ ಹೆಸರು ನೋಂದಾಯಿಸಿದ್ದೂ ಆಯಿತು, ಒಳಗಡೆ ಹೋಗಿ ಕುಳಿತಿದ್ದೂ ಆಯಿತು. ಶಿವಗುರು ಅವರ ಶಿಷ್ಯರಲ್ಲೊಬ್ಬರಾದವರು ಅದನ್ನು ನಡೆಸಿಕೊಟ್ಟರು. ಅವರ ತೇಜಸ್ಸಿಗೂ ತಕ್ಷಣ ಅವನು ಮಾರುಹೋದ. ಶಿವಗುರುಗಳ ಪ್ರಭಾವ ಅಪೂರ್ವವಾದದ್ದು, ಅವರಲ್ಲದೆ ಅವರ ಶಿಷ್ಯರದೂ ಎಷ್ಟೊಂದು ಮನತಟ್ಟುವ ನಡತೆ ಇದೆ. ಆ ಪೂರ್ತಿ ಕಾರ್ಯಕ್ರಮ ನಡೆಸಿಕೊಡುವವರು ಏನೂ ಸಂಭಾವನೆ ಇರದೇ ಕೆಲಸ ಮಾಡುವ ಕಾರ್ಯಕರ್ತರು. ಅವರು ನಗುನಗುತ್ತಾ ಇವರಿಗೋಸ್ಕರ ಮಾಡಿದ ಎಲ್ಲ ಕೆಲಸಗಳನ್ನು ನೋಡಿ ಅವರದೂ ಎಂತಹ ನಿಸ್ವಾರ್ಥ ಸೇವೆ ಎನ್ನಿಸಿತು.
ಅದಾದ ಮೇಲೆ ಅವನನುಭವಕ್ಕೆ ಬಂದಿದ್ದು ಒಂದು ಅವಿವರಣೀಯ ಸಂಗತಿ. ಇವನು ಭಾಷೆಯಲ್ಲಿ ಎಷ್ಟೇ ಜಾಣನಿದ್ದರೂ ಆ ಅನುಭವವನ್ನು ವಿವರಿಸುವ ಧೈರ್ಯ ಮಾಡಲಾರ. ದಿನಕ್ಕೆ ಮೂರು ತಾಸಿನಂತೆ, ನಾಲ್ಕು ದಿನಗಳ ಸುಧೀರ್ಘ ಸೆಷನ್ನುಗಳು ಆದನಂತರ ರವಿವಾರ ಪೂರ್ತಿ ದಿನದ ತರಬೇತಿಯ ನಂತರ ಎಲ್ಲರಂತೆ ಆ course ನಲ್ಲಿ ಇವನಿಗೂ ದೀಕ್ಷೆ ಕೊಡಲಾಯಿತು. ಅಬ್ಬಾ! ಅದೆಂಥ ಅನುಭೂತಿ! ಅದೆಂಥ ಅಗಾಧತೆಯ ಅರಿವು! ಇಡೀ ಬ್ರಹ್ಮಾಂಡದ ಅಂಥ ಅಗಾಧತೆಯ ಮುಂದೆ ತಾನೆಂಥ ಹುಲ್ಲು ಕಡ್ಡಿ ಎನಿಸಿತು. ತನ್ನ ಸೊಕ್ಕು, ತನ್ನ ಆಸೆ-ಅಪೇಕ್ಷೆ, ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯ ಹೀಗೆ ತನ್ನ ಲಕ್ಷಣಗಳ ಬಗ್ಗೆ ಅನೇಕ ಪರ್ಯಾಯ ಪದಗಳು, ವಿಶೇಷಣಗಳು ತೋಚುತ್ತಾ ಹೋದ ಹಾಗೆ ಅವೆಲ್ಲಾ ಕ್ಷುಲ್ಲಕ ಅನಿಸಿಬಿಟ್ಟವು. ಎಲ್ಲಾ ಬಿಟ್ಟು ಓಡಿ ಹೋಗಲೇ ಎಂದೂ ಅನಿಸಿತು. ಎಂದೂ ಭಾವುಕನಾಗಿ ಅಳದೇ ಇರುವವನ ಕಣ್ಣುಗಳು ಕಣ್ಣೀರ ಕೋಡಿ ಹರಿಸಿದ್ದವು. ಯಾವದೋ ವಿಚಿತ್ರ ಸಂಕಟ. ಸಂಕಟವಲ್ಲ, ಒಂಥರಾ ಭಾವೋದ್ವೇಗ. ಅಳುತ್ತಿರುವುದಾದರೂ ಏಕೆ, ದುಃಖಕ್ಕಾಗಿಯೋ ಸುಖಕ್ಕಾಗಿಯೋ, ಭಯಕ್ಕೋ, ಉನ್ಮಾದಕ್ಕೋ ಒಂದೂ ತೋಚದ ಥರ ಒಂದೇ ಸಮನೆ ಅಳುತ್ತಾ ಹೋದ. ಆಳುತ್ತಾ ಅಳುತ್ತಾ ಹೋದಂತೆ ಏನೇನೋ ವಿಚಿತ್ರ ಸಂಗತಿಗಳು ಗೋಚರಿಸುತ್ತ ಹೋದವು......
ಮನೆಯಲ್ಲೂ ಬರಬರುತ್ತಾ ಇವನ ನಡವಳಿಕೆ ಒಂಥರಾ ವಿಚಿತ್ರವಾಗ ತೊಡಗಿತು. ಕೆಲವೊಮ್ಮೆ ಏನೂ ಸ್ಪಷ್ಟವಾಗಿ ಕಾಣದ ಥರ, ಕೆಲವೊಮ್ಮೆ ಏನೋ ಹೊಸತು ಕಂಡುಕೊಂಡ ಥರ. ಕೆಲವೊಮ್ಮೆ ಎಲ್ಲಾ ಕಳೆದುಕೊಂಡ ಥರ, ಇನ್ನೂ ಕೆಲವೊಮ್ಮೆ ಯಾರಿಗೂ ಇರಲಾರದ್ದನ್ನು ಪಡೆದುಕೊಂಡ ಥರ. ಚಿತ್ರ ವಿಚಿತ್ರವಾದ ಅನುಭವ, ಅನಿಸಿಕೆಗಳು. ಯಾರಲ್ಲಿ ಹೇಳಿಕೊಂಡರೂ ಅವರು ಅರ್ಥ ಮಾಡಿಕೊಳ್ಳಲಾರೆಂಬ ಮುನ್ನೆಣಿಕೆ. ಖುಷಿಯೂ ಹೌದು, ಗೊಂದಲವೂ ಹೌದು. ಹೀಗೆಯೇ ವಿವರಿಸಲಾಗದ ದಿಗಿಲಿನಲ್ಲಿ ಇನ್ನೆರಡು ದಿನ ಉಳಿದ course ಮುಗಿಸಿದ. ಅದರಲ್ಲಿ ಕೊನೆಯ ದಿನ ಅವನು ಈ ಮೊದಲೇ ನೋಡಿದ ವೆಬ್ ಸೈಟ್ ಮಾಹಿತಿ ಪ್ರಕಾರ ಶಿವಗುರು ಅವರ ವಿಶೇಷ ಕಾರ್ಯಕ್ರಮದ ಬಗ್ಗೆ ಪ್ರಕಟಣೆಯನ್ನು ಮಾಡಲಾಯಿತು. ತಕ್ಷಣ ಇವನು ಹೋಗಲೇ ಬೇಕೆಂದು ನಿರ್ಧಾರ ಮಾಡಿದ.
ಅಂದು ರಾತ್ರಿ ಸುಮಾರು ದಿವಸಗಳಿಂದ ಕೆಲಸ ಮತ್ತು ಯೋಗದ course ನಲ್ಲಿ ಮಗ್ನವಾಗಿದ್ದರಿಂದ ಭೇಟಿಮಾಡಲಿಕ್ಕಾಗದೇ ಇರುವ ತನ್ನ ವಾಡಿಕೆಯ ಗೆಳೆಯನನ್ನು ಕಾಣಲು ಹೋದ. ಬಹಳ ದಿವಸಗಳ ನಂತರ ಸಿಕ್ಕ ಗೆಳೆಯ ಹೇಳದೇ ಕೇಳದೇ ವ್ಹಿಸ್ಕಿಗೆ ಅಣಿವು ಮಾಡತೊಡಗಿದ. ರಾಜೀವನೂ ಬೇಡವೆನ್ನಲಿಲ್ಲ. ಅವನ ತಲೆಯೂ ಮಿತಿಮೀರಿ ದುಡಿದ ಕಾರ್ಯಾಗಾರ ವಾಗಿತ್ತು. ಸ್ವಲ್ಪ ಪುನರುಜ್ಜೀವನ ವ್ಹಿಸ್ಕಿಯ ರೂಪದಲ್ಲಿ ಬೇಕಾಗಿತ್ತು. ಇಬ್ಬರೂ ಗೆಳೆಯರು ಕುಡಿಯತೊಡಗಿದರು. ಒಂದೆರಡು ಪೆಗ್ಗು ಒಳಗೆ ಹೋದ ಮೇಲೆ ಒಳಗಿನ ಮನುಷ್ಯರು ಪ್ರಕಟವಾದರು. ರಾಜೀವ ತುಂಬಾ ಭಾವುಕನಾಗಿ ತನ್ನ ಅಳಲನ್ನು ಹೇಳಿಕೊಂಡ. ಅಷ್ಟರಲ್ಲೇ ತನ್ನ ಮೇಲ್ಮೆಯನ್ನು ತೋರಿಸಿಕೊಳ್ಳಲೂ ಮರೆಯಲಿಲ್ಲ. ತನಗಾದ ಅನುಭವಗಳ ಬಗ್ಗೆ, ತಾನು ಹೊಸದಾಗಿ ಕಂಡುಕೊಂಡ ದಾರ್ಶನಿಕತೆಯ ಬಗ್ಗೆ. ಶಿವಗುರುಗಳ ಪ್ರಕಾಂಡತೆ ಬಗ್ಗೆ ಅವರು ತನ್ನ ಮಾವನೋ ಎನ್ನುವ ರೀತಿ ಹೇಳಿಕೊಳ್ಳಲಾರಂಭಿಸಿದ. ಅವನ ಗೆಳೆಯ ಮನೀಷ್‌ನೂ ಸಾಮಾನ್ಯ ಪ್ರತಿಭೆಯವನಲ್ಲ. ಸಾಕಷ್ಟು ತರ್ಕವನ್ನು ತನ್ನ ವ್ಯಾವಹಾರಿಕ ಜೀವನಶೈಲಿಯಲ್ಲಿ ಕಂಡುಕೊಂಡಿದ್ದ. ಯಾರೇ ಒಂಚೂರು ದಾರ್ಶನಿಕತೆಯ ಬಗ್ಗೆ ಮಾತನಾಡಿದರೂ ಅದಕ್ಕೆ ವಿರುಧ್ಧವಾಗಿ ತನ್ನದೇ ಶೈಲಿಯಲ್ಲಿ ವಾದವನ್ನು ಮಂಡಿಸುತ್ತಿದ್ದ. ರಾಜೀವನ ಕಥೆ ಕೇಳಿ ಒಂಥರಾ ಸೊಕ್ಕಿನ ನಗು ನಗತೊಡಗಿದ.
"ಯಾರು? ಶಿವಗುರು ಅವರಾ? ಅವರ ಬಗ್ಗೆ ನಾನು ಎನೇನೋ ಓದಿದ್ದೀನಲ್ಲಪ್ಪಾ?"
"ಏನೋ ನೀನು ಓದಿರೋದು? ಅಂಥದ್ದಿಂಥದ್ದೇನಾದರೂ ಇದೆಯಾ? ನಾನೂ ಸುಮಾರಾಗೇ ಅವರ ಬಗ್ಗೆ ಓದಿದ್ದೇನಲ್ಲ? ಅಂಥದ್ದೇನೂ ನನ್ನ ಗಮನಕ್ಕೆ ಬರಲಿಲ್ಲವಲ್ಲ?"
"ಹೌದಾ, ಹಾಗಾದರೆ ಇದನ್ನು ನೀನು ಖಂಡಿತಾ ನೋಡಿರೊಲ್ಲ, ಇಗೊ, ಇದನ್ನ ಸ್ವಲ್ಪ ನೋಡು" ಎಂದು ಮನೀಷ ತನ್ನ ಐ ಪ್ಯಾಡ್ ನಲ್ಲಿ ಒಂದು ವಿಡಿಯೊ ಹಾಕಿ ತೋರಿಸಿದ. ಅದರಲ್ಲಿ ನೋಡಿ ರಾಜೀವ ತನ್ನ ಕಣ್ಣುಗಳನ್ನೇ ನಂಬದಾದ! ಅದೊಂದು ಸಾಕ್ಷ್ಯ ಚಿತ್ರ. ಶಿವಗುರು ಅವರ ಬಗ್ಗೆ ಯಾರೋ ಒಂದಿಬ್ಬರು ಮೂವರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದರು. ಶಿವಗುರು ಅವರಿಗೆ ಮದುವೆಯಾಗಿತ್ತೆಂದಲೂ, ಅವರೂ ಸಹ ಶೋಕಿಯ ಜೀವನ ಸಾಗಿಸಿದ್ದಾರೆಂದಲೂ, ಅವರಿಗೆ ಒಬ್ಬ ಮಗನಿದ್ದಾನೆಂತಲೂ ಇತ್ಯಾದಿ ರಾಜೀವನಿಗೆ ಗೊತ್ತಿದ್ದ ವಿಷಯಗಳೇ ಇದ್ದರೂ ಕೊನೆಯಲೊಂದು ಪ್ರಶ್ನೆ ಹದ್ದಿನ ಹರಿತ ಕೊಕ್ಕು ಚುಚ್ಚಿದ ಹಾಗೆ ಚುಚ್ಚಿತು. "ಶಿವಗುರು ಅವರ ಹೆಂಡತಿ ಚಿಕ್ಕ ವಯಸ್ಸಿನಲ್ಲೇ ಮರಣಕ್ಕೀಡಾಗಿದ್ದು ಆ ಅಕಾಲಿಕ ಮರಣದ ಹಿಂದೆ ಏನಾದರೂ ಶಿವಗುರುಗಳ ಕೈವಾಡವಿದೆಯೆ?" ಎಂಬುದು.
ಅರೆ ಕ್ಷಣ ಏನೂ ಮಾತನಾಡದೆಹೋದ ರಾಜೀವ. ಮೊದಲಿನ ಎಲ್ಲ ಸಂಗತಿಗಳು ರಾಜೀವನಿಗೆ ಹೆಚ್ಚು ಕಡಿಮೆ ಗೊತ್ತಿದ್ದವು. ಶಿವಗುರು ಅವರು ಮದುವೆ ಯಾಗಿದ್ದು, ಸಂಸಾರಿಯಾಗಿದ್ದುಕೊಂಡೇ ಯೋಗಿಯಾಗಿ ಜನರಿಗೆ ಸಾಧನೆ ಹೇಳಿಕೊಡಲಾರಂಭಿಸಿದ್ದು, ಅವರ ಬಗ್ಗೆ ಆ ಕೋರ್ಸಲ್ಲಿ ನೋಡಿದ ವಿಡಿಯೋದಲ್ಲೇ ಇದ್ದವು. ಇವನಿಗೆ ಕಷ್ಟವೆನಿಸಿದ ವಿಷಯ ಅದಾಗಿರಲಿಲ್ಲ. ಅವರ ಪತ್ನಿಯ ಮರಣದ ಬಗ್ಗೆ ತಾನು ಯೋಚಿಸದೇ ಹೋದ ಒಂದು ಆಯಾಮ ನೆನೆಸಿಕೊಂಡೇ ತಾನು ಮಾಡಿದ ಕೋರ್ಸ ಬಗ್ಗೆ ಮತ್ತು ತನ್ನ ಬಗ್ಗೆಯೇ ಒಂಥರಾ ಜುಗುಪ್ಸೆ ಉಂಟಾಯಿತು. ಇದಕ್ಕೂ ಮುಂಚೆ ತಾನು ನೋಡಿದ ಸ್ವ ಘೋಷಿತ ದೇವ ಮಾನವರ ಜೀವನದಲ್ಲಿ ಒಂದಲ್ಲಾ ಒಂದು ವಾದವಿವಾದ ಇದ್ದೇ ಇತ್ತು. ಯಾರೊ ಲೈಂಗಿಕ ಹಗರಣದಲ್ಲೋ, ಇನ್ನೂ ಕೆಲವರು ದುಡ್ಡು, ರಾಜಕಾರಣಿಗಳ ಸಾಂಗತ್ಯದ ವಿವಾದಗಳಲ್ಲೋ ಸಿಕ್ಕಿಕೊಂಡಿದ್ದರು. ರಾಜಕಾರಣಿಗಳಿಗಿಂತ ಪ್ರಬಲ ಶಕ್ತಿಯ ಆಗಾರವಾದವರೂ ಸುಮಾರು ಜನ ಸ್ವಾಮಿಗಳಿದ್ದೇ ಇದ್ದರು. ಅವೆಲ್ಲರನ್ನು ನೋಡಿಯೇ ರಾಜೀವನಿಗೆ ಆಧ್ಯಾತ್ಮದ ಬಗ್ಗೆ ಸಂಶಯ ಮೂಡಿದ್ದೂ ನಿಜ. ಆದರೂ ಶಿವಗುರುವಿಗೆ ಅವನು ಮಾರು ಹೋದದ್ದು ಅವರ ವಾಕ್ ಪಾಂಡಿತ್ಯಕ್ಕೆ, ಅವರ ಪ್ರೌಢಿಮೆಗೆ. ಇಷ್ಟೆಲ್ಲ ಗೊತ್ತಿರುವವರು ಇಂಥದೆಲ್ಲ ಮಾಡುವ ಅವಕಾಶವೇ ಇಲ್ಲ ಎಂದೆಲ್ಲಾ ಅಂದುಕೊಂಡ. ಆದರೆ ಅಂಥದ್ದೇನಾದರೂ ನಿಜವಾಗಿಯೂ ಅಗಿದ್ದಾದರೆ? ಛೇ, ಎಂಥ ಕೆಲಸ ಮಾಡಿಬಿಟ್ಟೆ ಎಂದು ಹಲುಬಿದ. ವ್ಯಕ್ತಿಯ ತರ್ಕ, ಅವನು ಏನು ಹೇಳುತ್ತಾನೆ ಎನ್ನುವದಕ್ಕಿಂತಲೂ ಆ ವ್ಯಕ್ತಿಯ ಹಿನ್ನೆಲೆ ಅವನು ಹೇಳುವದರ ಪ್ರಭಾವದ ಮೇಲೆಯೇಪರಿಣಾಮ ಬೀಳಿಸುತ್ತದೆ ಎನ್ನುವದು ನಿಜಕ್ಕೂ ನಿರುಪಯೋಗಿ ವಿಡಂಬನೆ.
ಅವನ ಆ ಸ್ಥಿತಿ ನೋಡಿ ಮನೀಷನೇ ಅಲ್ಲಾ, ಯೋಚನೆ ಮಾಡಿ ನೋಡು, ಈಗಿನ ಕಾಲದಲ್ಲಿಯೂ ದೇಹ ಬಿಡುವದು ಅಂತ ಒಂದಿದೆಯೇ? ಯಾರಾದರೂ ಇಛ್ಛಾ ಮರಣ ಹೊಂದುವದು ಸಾಧ್ಯವಿದೆಯೇ? ಅವರ ಹೆಂಡತಿಯೂ ಸಹ ಅವರ ಹಾಗೆ ಯೋಗದಲ್ಲಿ ನಿಸ್ಸೀಮರಿದ್ದರಂತೆ ಅನ್ನುವದೇನೋ ನಿಜವಿರಬಹುದು. ಆದರೆ ಯಾರಿಗೆ ತಾನೆ ಅಂಥ ಚಿಕ್ಕ ವಯಸ್ಸಿನಲ್ಲಿ ದೇಹ ತ್ಯಾಗ ಮಾಡಲಿಕ್ಕೆ ಧೈರ್ಯ ಅಥವಾ ಮಾಡುವ ಸಂಪೂರ್ಣ ಜ್ಞಾನ ಇರಲು ಸಾಧ್ಯ? ಏನೋ ಒಂದಿರಬೇಕಲ್ಲವೇ? ಒಬ್ಬರನ್ನು ಹೊಸಕಿ ತಾನು ಮುಂದೆ ಬರಲಿಕ್ಕೆ ಮನುಷ್ಯ ಏನೇನು ಮಾಡುತ್ತಾನೋ ಸ್ವತಃ ಮನುಷ್ಯ ಜನ್ಮಕ್ಕೇ ಅರಿಯದ ಸಂಗತಿ. ಎಂದೆಲ್ಲಾ ಒಳಗೆ ಹಾಕಿದ ಪರಮಾತ್ಮನ ಇರುವಿನ ಬಗೆಗೇ ಸಂಶಯ ತರುವಂತಹ ಮಾತು ಮಾತನಾಡಿದ. ರಾಜೀವನಿಗೆ ಇಲ್ಲದ ಗೊಂದಲ ಶುರುವಾಯಿತು. ಹಿಡಿದಿದ್ದನ್ನು ಸುಮ್ಮನೆ ಬಿಡುವ ಜಾಯಮಾನದವನಲ್ಲ ಅವನು. ಇಂಥದ್ದೇನೊ ಮಾಡಿ ಸುಮ್ಮನೇ ತನಗೆ ತಾನೇ ನಗೆಪಾಟಲಿಗೀಡಾದೆನಲ್ಲ ಎಂದು ಯೋಚಿಸತೊಡಗಿದ. ತನ್ನ ಮೇಲೆ ಕನಿಕರ, ಶಿವಗುರುಗಳ ಮೇಲೆ ಸಿಟ್ಟು, ಎರಡೂ ಉಂಟಾದವು. ಈ ಗದ್ದಲದಲ್ಲಿ ಪರಮಾತ್ಮ ಸ್ವಲ್ಪ ಜಾಸ್ತಿಯೇ ಒಳಗಡೆ ಹೋಗಿದ್ದು ಅವನ ಗಮನಕ್ಕೆ ಬಂದಿದ್ದು ಮಾರನೆ ದಿನ ಎಚ್ಚೆತ್ತಾಗಲೇ. ತಲೆ ಎನ್ನುವದು ದೇವಸ್ಥಾನದಲ್ಲಿ ಬಾರಿಸುವ ಜಾಗಟೆಯ ಹೊಳಲಾಗಿತ್ತು.
ಆ ಪೂರ್ತಿ ದಿವಸ ತನಗಾದ ಅನುಭವಗಳ ಬಗ್ಗೆ ಯೋಚಿಸುವದರಲ್ಲೇ ಹೋಯಿತು. ತಾನು ಅಲ್ಲಿ ಕಲಿತ ವಿಶಿಷ್ಠ ಸಂಗತಿಗಳು ಒಂದು ಹೊಸ ಅರಿವು ಮೂಡಿಸಿದ್ದೇನೋ ನಿಜ. ವ್ಯಕ್ತಿ ತನ್ನನ್ನು ತನಗಿಂತ ಹೊರಗಿಟ್ಟು ನೋಡಿದಾಗಲೇ ತಾನು ಬೇರೆಯವರನ್ನು ಯಾವ ದೃಷ್ಟಿಯಿಂದ ನೋಡುವನೋ ಹಾಗೆ ತಾರತಮ್ಯ ಇರದೆ ನೋಡಲು ಸಾಧ್ಯ. ಬೇರೆಯವರ blind spot ಗುರುತಿಸುವದು ಎಷ್ಟು ಸುಲಭವೋ ತನ್ನದನ್ನು ಕಂಡುಹಿಡಿಯುವದು ಅಷ್ಟೇ ಕಷ್ಟ. ಯಾವುದೇ ಸಂಗತಿ ಜೀವಕ್ಕೆ ಕುತ್ತು ಬರುವಷ್ಟು ಗಂಭೀರವಾಗಿಲ್ಲದಿದ್ದರೂ ನಾವು ಮಾತ್ರ ಅದರ ಮೇಲೆಯೇ ನಮ್ಮ ಜೀವನ ನಿಂತಿದೆ ಎನ್ನುವಷ್ಟು ಗಂಭೀರವಾಗಿ ಯೋಚಿಸುವದು, ಸಂಗತಿಗಳು ನಮಗೆ ಬೇಕಾದ ಹಾಗೆ ನಡೆಯದಿದ್ದಾಗ ಮಾತ್ರ. ಇನ್ನೂ ಹಲವಾರು ಸಂಗತಿಗಳು ಧುತ್ತೆಂದು ಕಣ್ಣ ಮುಂದೆ ಬಂದು ಮಾಯವಾಗುತ್ತಿದ್ದವು. ಇವೆಲ್ಲ ಅನುಭೂತಿಯ ಜೊತೆಗೆ ನಾನೇನಾದರೂ ಕಳ್ಳ ಸನ್ಯಾಸಿಗೆ ಮೋಸ ಹೋಗುತ್ತಿದ್ದೇನೆಯೇ ಎಂಬ ಸಂಶಯವೂ ಸುಳಿಯದೇ ಇರಲಿಲ್ಲ.ಆದರೆ ಅವನಿಗಾದ ಆಶ್ಚರ್ಯದ ಸಂಗತಿಯೆಂದರೆ ತಾನು ಮಾಡಿದ ಕೋರ್ಸಗಾಗಿ ಬರೀ ಒಂದು ಸಾವಿರ ಮಾತ್ರ ಖರ್ಚು ಮಾಡಿದ್ದ. ಏನು ಬರುತ್ತೆ ಈ ಕಾಲದಲ್ಲಿ? ದುಡ್ಡು ಮಾಡುವ ಸಂಸ್ಥೆಯೇನಾದರೂ ಆಗಿದ್ದಿದ್ದಲ್ಲಿ ಇಂಥ ಒಂದು ವಾರದ ಕೋರ್ಸಗೇ ಸುಮಾರು ಫೀಜು ಹೇರಬಹುದಿತ್ತಲ್ಲಾ? ಬರೀ ಶ್ರೀಮಂತರು ಮಾಡುವಂಥ ಧ್ಯಾನ ಸಂಕೂಟಗಳಿಗೇನು ಕಮ್ಮಿಯಿಲ್ಲ ಇಲ್ಲಿ.
ಇವೆಲ್ಲಾ ಪ್ರಶ್ನೆಗಳಿಗೆ ಪರಿಹಾರ ಸಿಗಬೇಕೆಂದರೆ ತನ್ನ ಕೋರ್ಸ ಮುಗಿದಇನ್ನೆರಡು ದಿನ ಬಿಟ್ಟು ಶುರುವಾಗಬೇಕಾಗಿದ್ದ ಶಿವಗುರು ಅವರು ಸ್ವತಃ ನಡೆಸಿಕೊಡಲಿದ್ದ ಒಂದು ಅಪರೂಪದ ಕಾರ್ಯಕ್ರಮಕ್ಕೆ ಹೋಗಲೇಬೇಕೆಂದು ನಿಶ್ಚಯಸಿದ್ದ. ಅದಕ್ಕೂ ಮುಂಗಡವಾಗಿ ಜಾಗೆ ಕಾಯ್ದಿಡಬೇಕಾಗಿತ್ತು. ಆದರೆ ಇವನ ನಿರ್ಣಯ ಧಿಡೀರನೇ ಆಗಿದ್ದರಿಂದ ತನ್ನಷ್ಟೆ ಧಿಡೀರ್ ಆಗಿ ಯೋಚಿಸಿ ತಯಾರಾಗಿದ್ದ ಇನ್ನೆರಡು ಜನರನ್ನು ಕೂಡಿಸಿಕೊಂಡು ತನ್ನ ಕಾರ್ ಒಡಿಸಿಕೊಂಡು ಹೋಗಲು ಅಣಿವಾದ. ಸುಮಾರು ಎಂಟು ತಾಸಿನ ಕಾರಿನ ಹಾದಿ ಅದು. ರಾತ್ರಿ ಇಡೀ ತಾನು, ಇನ್ನೊಬ್ಬನ ಜೊತೆ ಕಾರು ಓಡಿಸಿಕೊಂಡು ಶಿವಗುರುಗಳ ಆಶ್ರಮವಿರುವ ಊರಿಗೆ ಹೋದ.
ಮರುದಿನ ಬೆಳಿಗ್ಗೆ ಆಶ್ರಮದಲ್ಲಿ ಕಾಲಿಡುತ್ತಿದ್ದಂತೆ ಅತೀ ಸುಂದರ ದೃಶ್ಯವೊಂದನ್ನು ನೋಡಿದ. ಆಹ್ಲಾದಕರ ಮುಂಜಾವು ಅದು, ಚುಮು ಚುಮು ಛಳಿ, ಹಿತವಾದ ನೆಲದ ವಾಸನೆ, ಪಕ್ಷಿಗಳ ಕಲರವ, ಎಲ್ಲೋ ಒಂದೆಡೆ ನವಿಲುಗಳ ಕೂಗು, ಎಷ್ಟೇ ಜುಗುಪ್ಸೆಗೊಂಡವನೂ ಜೀವನದ ಬಗ್ಗೆ ಪುಲಕಿತವಾಗುವಂಥ ವಾತಾವರಣವದು. ಪರ್ವತಗಳ ಅಡಿ ಇದ್ದ ಆಶ್ರಮದ ನೋಟವೇ ಒಂದು ದೈವೀ ಅನುಭವವಾಗಿತ್ತು. ಕಣ್ಣೆತ್ತಿ ಸಾಲು ಸಾಲಾಗಿ ಮಲ್ಲ ಯೋಧ್ಧರ ಹಾಗೆ ನಿಂತು ತಮ್ಮ ಸುಂದರ ಅಂಗಸೌಷ್ಠವ ತೋರಿಸುತ್ತಿರುವ ಪರ್ವತಗಳತ್ತ ನೋಡಿದ. ಅಂಥ ಅದ್ಭುತ ಪರ್ವತಗಳ ಶ್ರೇಣಿಯನ್ನು ಮುತ್ತಿಕ್ಕಲು ಮೋಡಗಳು ಸ್ಪರ್ಧಿಸುವ ರೀತಿ ತೋರುತ್ತಿತ್ತು. ನಂತರ ಮೋಡಗಳು ಸಾಲಾಗಿ ಎಲ್ಲಕ್ಕಿಂತ ಎತ್ತರವಿರುವ ಪರ್ವತದ ಸುತ್ತ ಸುತ್ತ ತೊಡಗಿದವು. ಅಂಥ ರಮಣೀಯ ದೃಶ್ಯ ರಾಜೀವನು ಪ್ರತ್ಯಕ್ಷವಲ್ಲ, ಟೀವಿಯಲ್ಲಿ ಕೂಡ ನೋಡಿರಲಿಲ್ಲ. ರಾತ್ರಿಯಿಡೀ ಕಾರು ನಡೆಸಿದ ಆಯಾಸ ಆವಿಯಾಗಿ ಹೋದಂತೆ ಅನಿಸಿತು. ತಾನು ಬಂದ ಉದ್ದೇಶವನ್ನೇ ಒಂದು ಘಳಿಗೆ ಮರೆತು ಎಲ್ಲರಿಗೆ ತಾನು ನೋಡಿ ಆನಂದಿಸುತ್ತಿದ್ದ ದೃಶ್ಯ ಬೆರಳುಮಾಡಿ ತೋರಿಸಿದ.
ರಿಜಿಸ್ಟರಿನಲ್ಲಿ ತನ್ನ ಹೆಸರು ದಾಖಲಿಸಿ ಎಲ್ಲರ ಜೊತೆಗೆ ಒಳಗೆ ನಡೆದ. ಸಾವಿರಾರು ಜನರು ನೆರೆದಿದ್ದರಿಂದ, ನಿಧಾನವಾಗಿ ಶಿವಗುರುಗಳ ಪ್ರಭಾ ರಾಜೀವನಿಗೆ ಅರಿವಾಗತೊಡಗಿತ್ತು. ತುಂಬಾ ದೊಡ್ಡದಾದ ಆಶ್ರಮವದು, ಇಷ್ಟೆಲ್ಲಾ ಜನರಿಗೆ ಅತ್ಯಂತ ಸುಲಭವಾಗಿ ಮತ್ತು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ರೀತಿಯ ಅನಾನುಕೂಲತೆ, ಅಸಹ್ಯಕರವಾದ ಅನುಭವ ಆಗಲಿಲ್ಲ. ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡುವ ಕಾರ್ಯಕರ್ತರು ಅವನಿಗಾಗುವ ಒಳ್ಳೆಯ ಅನುಭವಕ್ಕೆ ನೆರವು ಮಾಡಿಕೊಡುತ್ತಿದ್ದರು. ತಣ್ಣೀರ ಸ್ನಾನವಾದರೂ ಹಿತವಾಗಿತ್ತು. ಯಾವಗಲೂ ತನ್ನದೇ ಮಾತು ಕೇಳುವಂತೆ ಒತ್ತಾಯಿಸುವ ದೇಹದಮೇಲೆ ಸೇಡು ತೀರಿಸಿಕೊಳ್ಳುವ ಮುದ್ದಾದ ಖುಷಿ ಅವನದು.
ಸ್ನಾನ, ತಿಂಡಿಯಾದನಂತರ ಶಿವಗುರುಗಳ ಸಾನಿಧ್ಯದಲ್ಲಿ ಎರಡು ದಿನಗಳ ಕಾರ್ಯಕ್ರಮ ಶುರುವಾಯಿತು. ಮೊದ ಮೊದಲು ಸರಿಯಾಗಿ ಸ್ಪೀಕರ್‌ಗಳಲ್ಲಿ ಕೇಳದ್ದಕ್ಕೋ, ತನಗಾದ ಆಯಾಸ ಮೈಯಲ್ಲಾವರಿಸದ್ದಕ್ಕೋ ಏನೋ, ಶಿವಗುರುಗಳು ಮಾತುಗಳಿಷ್ಟವಾದರೂ ಜೊಂಪು ಹತ್ತ ತೊಡಗಿತು. ಆದರೆ ನಂತರ, ಬೇರೆ ಬೇರೆ ರೀತಿಯ ಕಸರತ್ತುಗಳು, ಮೋಜಿನ ಆಟಗಳು, ಶಿವಗುರುಗಳ ವಿನೋದದ ಆಖ್ಯಾಯಿಕೆಗಳು ಎಲ್ಲ ಒಟ್ಟಿನಲ್ಲಿ ಆ ಕಾರ್ಯಕ್ರಮದ ಬಗೆಗಿನ ಬೇಸರವನ್ನು ಹೋಗಿಸಿದ್ದವು. ವಿರಾಮದ ಸಮಯಗಳಲ್ಲಿ ಅಲ್ಲಿರುವ ಗುಂಪು ಹಾಡುವ ಹಾಡುಗಳು, ಮಂತ್ರಗಳ ಹಾಗೆ ಕೇಳಿಸುವ ಪಠನಗಳು, ಇಡೀ ವಾತಾವರಣವನ್ನು ಮೈ ನವಿರೇಳಿಸುವಂತೆ ಮಾಡಿದ್ದವು. ಮಧ್ಯಾಹ್ನ ರಾಜೀವ ತನ್ನ ಸ್ನೇಹಿತರೊಂದಿಗೆ ಅಲ್ಲಿರುವ ಕೊಂಡದಲ್ಲಿ ಮುಣುಗಿ ಎದ್ದು, ಶಿವನ ದೇವಸ್ಥಾನಕ್ಕೂ ಭೇಟಿಯಿತ್ತು ಬಂದ. ಅಲ್ಲಿಯೂ ಕೂಡ ರಾಜೀವನಿಗೆ ಹೇಳಲು ಅಸಾಧ್ಯವಾದ ಮೈ ಪುಳಕವಾಯಿತು. ದೇವರನ್ನು ನಂಬದ, ಈ ಜಗತ್ತಿನಲ್ಲಿ ತನಗೆ ಗೊತ್ತಿರುವ ಸಂಗತಿಗಳಿಗಿಂತ ಗೊತ್ತಿರದ ಸಂಗತಿಗಳೇ ಜಾಸ್ತಿ ಇವೆಯೆಂಬುದು ಅವನಿಗೆ ಮನದಟ್ಟಾಗಿದ್ದು ಆ ದೇವಸ್ಥಾನಕ್ಕೆ ಭೇಟಿ ಕೊಟ್ಟಮೇಲೆಯೇ. ಅರ್ಧ ದಿನ ಕಳೆದ ನಂತರ ಶಿವಗುರುಗಳು ಹೇಳಿದ ಪ್ರಕಾರ ನಾಲ್ಕು ತಾಸುಗಳವರೆಗೆ ಯಾರ ಜೊತೆಯೂ ಮಾತನಾಡದೆ ಮೌನವಾಗಿ ಕಳೆದ. ಇಷ್ಟು ಹೊತ್ತು ಅವನು ಮೌನವಾಗಿದ್ದು ಮಾತು ಬಂದ ಮೇಲೆ ಅಥವಾ ಮಲಗದಾಗ, ಮೊದಲ ಸಲ ಅನಿಸುತ್ತೆ. ಮಾತು ಬೆಳ್ಳಿ, ಮೌನ ಬಂಗಾರ ಎನ್ನುವದು ಬರೀ ಗಾದೆಮಾತಲ್ಲ, ಆ ಗಾದೆ ಮಾತಿಗಿಂತ ದೊಡ್ಡದು ಎಂಬುದು ಅವನಿಗೆ ಅರಿವಾಯಿತು. ಮನುಷ್ಯ ಮಾತನಾಡದೆ ಇದ್ದಾಗ ಬರು ಯೋಚನೆಗಳು ಮತ್ತು ಆ ಯೋಚನೆಗಳಿಗೆ ಹೊರಗೆಡಕದೆ ಹೋದಾಗ ಆಗುವ ಯಾತನೆಗಳು ಎಲ್ಲವೂ ತನ್ನ ಒಳಗಿನಿಂದ ಬಂದದ್ದೇ ಆದರೂ ಹೊಸವೆನಿಸಿದವು. ಮನುಷ್ಯ ತನ್ನನ್ನು ತಾನೇ ಅರಿತುಕೊಳ್ಳ ಬಯಸಿದರೆ ಮೊಟ್ಟ ಮೊದಲ ಕೆಲಸ ಮಾಡಬೇಕಾಗಿರುವದು - ಮೌನದಿಂದ ಇರುವದು ಎಂದು ಮನದಲ್ಲೇ ಅಂದುಕೊಂಡ. ಹೆಂಡತಿ, ಮಕ್ಕಳು, ಕೆಲಸ, ಗ್ರಾಹಕರು, ಸ್ನೇಹಿತರು ಇತ್ಯಾದಿ ಇತ್ಯಾದಿಯಾಗಿ ದೂರಲಿಕ್ಕೆ ನೂರಾ ಎಂಟು ನೆಪ ಹುಡುಕುವಾತನಿಗೆ ಅಂದು ಯಾರಾದರು ಮುಂದೆ ಬರಬಾರದೆ ಒಂಚೂರಾದರೂ ಮಾತನಾಡಲಿಕ್ಕೆ? ಎಂದೆನಿಸಿತು. ಆದರೆ ಬರುತ್ತಾ ಬರುತ್ತಾ ಆ ಮೌನದಲ್ಲಿನ ನೀರವತೆಯೇ ಆಪ್ತವಾಗತೊಡಗಿತು. ಜಗತ್ತಿನ ಬಗ್ಗೆ ವೈರಾಗ್ಯ ಬರತೊಡಗಿತು. ಮನುಷ್ಯರ ಹೊರತಾಗಿ ಎಷ್ಟೆಲ್ಲ ಜೀವಜಂತುಗಳು ಮಾತನಾಡಿಯೇ ಬದುಕುವದು? ಎಷ್ಟು ಚೆನ್ನಾಗಿ ಅವು ತಮ್ಮ ದಿನ ನಿತ್ಯದ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಹೋಗುತ್ತವೆ? ಹೌದು, ಮಾತು - ಮನಸ್ಸು ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ಬೇರೆಯಾಗಿಸುವವೇನೋ ನಿಜ, ಆದರೆ ಅವೇ ಅವನ ದುಃಖಕ್ಕೂ ಮೂಲವಾಗುವವಲ್ಲವೆ? ಮಾರ್ಕೆಟಿಂಗ್ನಲ್ಲಿದ್ದ ತನ್ನ ವಾಕ್ಷಮತೆಗೆ ಬೀಗುತ್ತಿದ್ದ ರಾಜೀವನಿಗೆ ಮಾತೆಂದರೇ ವಾಕರಿಕೆ ಬರುವಂತಾಯಿತು. ಪುನಃ ಆ ದಿನದ ಬಾಕಿ ಕಾರ್ಯಕ್ರಮ ಶುರುವಾಗತೊಡಗಿದ ನಂತರ ಅವನ ತಲೆ ವಿಚಾರಗಳಿಂದ ಪೂರ್ತಿ ತುಂಬಿ ಹೋಗಿ ಒಂದು ಸಲ ಪೂರ್ತಿಯಾಗಿ ವಿಚಾರರಹಿತವಾಗಿಯೂ ಹೋಯಿತು. ಶಿವಗುರುಗಳು ಹೇಳಿಕೊಟ್ಟ ಯೋಗ, ಧ್ಯಾನವನ್ನು ಮಾಡಿದ ನಂತರವಂತೂ, ಶಿವಗುರುಗಳ ಕೊಂಚ ಧ್ವನಿ ಕೇಳುವದೇ ತಡ, ಹುಚ್ಚು ಹಿಡಿದಂತೆ ಭಾವಾವೇಶದಿಂದ ಚೀರಾಡುವ ಇತರ ಶಿಷ್ಯವೃಂದವನ್ನು ನೋಡಿ ರಾಜೀವನಿಗೆ ಅಮಲಿನ ಹುಚ್ಚು ಹಿಡಿಯುವದೊಂದೇ ಬಾಕಿ. ಆ ರಾತ್ರಿ ವಿಪರೀತ ದಣಿವು ಆಗಿದ್ದರೂ ಬಹಳ ಹೊತ್ತಿನವರೆಗೆ ರಾಜೀವನಿಗೆ ನಿದ್ರೆ ಬರಲಿಲ್ಲ. ಮರುದಿನ ಬೆಳಿಗ್ಗೆ ಬೇಗ ಎದ್ದು ತಣ್ಣೀರ ಸ್ನಾನ ಮಾಡಿ ಮುಂದಿನ ದೊಡ್ಡ ಮೈದಾನದಲ್ಲಿ ನೆರೆಯಬೇಕೆಂದು ಪ್ರಕಟಣೆ ಆಗಲೇ ಆಗಿತ್ತು. ಚಳಿಯಲ್ಲಿ ತಣ್ಣೀರ ಸ್ನಾನವಿರಲಿ, ಎದ್ದೇಳುವದೂ ಇಲ್ಲ, ಯಾರು ಬಂದು ಎಬ್ಬಿಸುತ್ತಾರೋ ನೋಡೋಣ ಎಂದು ಬಲವಂತವಾಗಿ ಕಣ್ಣು ಮುಚ್ಚಿ ಮಲಗಿದ. ಹೊತ್ತು ಆಗಲೇ ಮಧ್ಯರಾತ್ರಿ.
ಮರುದಿನ ಬೆಳಿಗ್ಗೆ, ಸುಮಾರು ನಾಲ್ಕಾಗಿರಬಹುದು, ಜನರ ಕಲರವದಿಂದ ಯಾಂತ್ರಿಕವಾಗಿ ಎಚ್ಚೆತ್ತುಕೊಂಡು ಸ್ನಾನ ಮಾಡುವದಿಲ್ಲ ಎಂದು ಸ್ವಗತ ಘೋಷಿಸಿಕೊಂಡಿದ್ದನ್ನು ಮರೆತು ಪೂರ್ತಿ ಹುಮ್ಮಸ್ಸಿನಿಂದ ತಣ್ಣೀರ ಸ್ನಾನ ಮುಗಿಸಿ, ಅಲ್ಲಿಯ ಶಿವಗುರುಗಳ ಕೆಲವು ನುರಿತ ಶಿಷ್ಯರು ಹೇಳಿ ಕೊಡುವ ಸೂರ‍್ಯ ನಮಸ್ಕಾರ ಇತ್ಯಾದಿ ಯೋಗಗಳನ್ನು ಪ್ರಾಮಾಣಿಕನಾಗಿ ಮುಗಿಸಿದ. ಒಂಬತ್ತರ ನಂತರ ಶಿವಗುರುಗಳ ಎರಡನೇ ದಿನದ ಕಾರ್ಯಕ್ರಮ ಶುರುವಾಯಿತು. ನಿನ್ನೆಗಿಂತಲೂ ಇವತ್ತಿನ ಹುಮ್ಮಸ್ಸು ಇಮ್ಮಡಿಯಾಗಿತ್ತು ಅಲ್ಲಿ ನೆರೆದ ಎಲ್ಲರಿಗೂ. ವಾತವರಣದಲ್ಲಿ ಒಂಥರಾ ಖುಷಿಯ ಅಲೆಯೇ ಎದ್ದಿತ್ತು. ಆ ಅಲೆಯಲ್ಲಿ ಕೊಚ್ಚಿ ಹೋಗುವದನ್ನೇ ಕಾಯುತ್ತಿರುವಂತೆ ರಾಜೀವ ಕಂಡುಬಂದ.
"ಎಲ್ಲರೂ ಐದು ಐದು ನಿಮಿಷ ತೆಗೆದುಕೊಳ್ಳಿ, ಹಲವು ಸಣ್ಣ ಗುಂಪುಗಳನ್ನು ಮಾಡಿಕೊಂಡು ಆ ಐದು ನಿಮಿಷಗಳಲ್ಲಿ ನೀವು ತುಂಬಾ ಖುಷಿಯಾಗಿದ್ದಾಗ ಏನು ಮಾಡಬಯಸುತ್ತೀರೊ ಅದನ್ನು ಮಾಡಿ. ಆ ಐದು ನಿಮಿಷಗಳ ನಂತರ ನೀವು ಜೀವಿಸುವದೇ ಇಲ್ಲ, ಅವು ನಿಮ್ಮ ಕೊನೆಯ ಐದು ನಿಮಿಷಗಳು ಎನ್ನುವ ಥರ ಖುಷಿಯಾಗಿ ಏನಾದರೂ ಗುಣುಗುಣಿಸಿ, ಕುಣಿಯಿರಿ ಅಥವಾ ಕುಪ್ಪಳಿಸಿರಿ" ಎಂದರು ಶಿವಗುರು. ರಾಜೀವ ತಾನು ಶುರು ಹಚ್ಚುವ ಮುನ್ನ ಇತರರನ್ನು ಗಮನಿಸಿದ. ಕೆಲವರು ಖುಷಿಯಲ್ಲಿರಲಿಕ್ಕೂ ಸಂಕೋಚಪಟ್ಟುಕೊಳ್ಳುತ್ತಿದ್ದರು. ಇನ್ನು ಕೆಲವರು ಖುಷಿ ಎಂದರೇನೆ ಗೊತ್ತಿಲ್ಲರದವರಂತೆ ಮುಖ ಕಿವಿಚಿ ಕಾಟಾಚಾರಕ್ಕೆ ಎನ್ನುವರ ಹಾಗೆ ಏನೋ ಒಚಿದು ಗುಣುಗುಣಿಸುತ್ತಿದ್ದರು. ಆವಾಗವನಿಗೆ ಅನ್ನಿಸಿತು, ಜೀವನದಲ್ಲಿ ನಾವೆಲ್ಲ ಇತರರ ಖುಷಿಗಾಗಿಯೋ ಇಲ್ಲಾ ಯಾರೂ ನಮ್ಮನ್ನು ಅರ್ಥ ಮಾಡಿಕೊಳ್ಳುವದೇ ಇಲ್ಲ ಎನ್ನುವ ಸೆಲ್ಫ್ ಪಿಟಿ ಯಿಂದಲೋ ಅಥವಾ ಗಂಭೀರವಾಗಿರುವದೇ ಪ್ರಬುಧ್ಧತೆಯ ಲಕ್ಷಣವೋ ಎನ್ನುವಂತೆ ಯಾವಾಗಲೂ ಭೂಮಿಯ ಭಾರ ತಲೆಮೇಲೆಯೇ ಹೊತ್ತುಕೊಂದು ತಿರುಗುತ್ತಿರುತ್ತೇವೆ. ಯಾವಾಗಲಾದರೂ ನಮ್ಮ ಒಳಗಿನ ಮಗು ಹೊರಗೆ ಬರಲೆತ್ನಿಸಿ ಅಪ್ರಯತ್ನವಾಗಿ ನಗು ಬಂತೋ ಅಥವಾ ಹಾಗೇ ಏನೋ ಒಂದಕ್ಕೆ ಇಷ್ಟಪಟ್ಟು ನಕ್ಕೆವೋ ಎಂದುಕೊಳ್ಳಿ, ಆ ಸುಖ ಬಾಳಿಕೆ ಬರುವುದರೊಳಗಾಗಿ ಬಲವಂತದ ಪ್ರಜ್ಞೆ ತರಿಸಿಕೊಂಡು ನಮ್ಮಲ್ಲಿ ಪುನಃ ಗಂಭೀರವಾಗುವವರೇ ಜಾಸ್ತಿ. ರಾಜೀವನು ಇದೆಲ್ಲಾ ಅರಿತುಕೊಂಡು ಮತ್ತು ನಿಜವಾಗಿಯೂ ಜಗತ್ತನ್ನೇ ಪಕ್ಕಕ್ಕಿಡಬಯಸಿ ಕಣ್ಣುಮುಚ್ಚಿ ತನ್ನ ಅಚ್ಚುಮೆಚ್ಚಿನ ಹಾಡೊಂದನ್ನು ವ್ಹಿಸಲ್ ಮಾಡತೊಡಗಿದ. ಉಳಿದವರು ತಾವು ಮಾಡುತ್ತಿದ್ದುದನ್ನು ನಿಲ್ಲಿಸಿ ಇವನತ್ತ ಅವಕ್ಕಾಗಿ ನೋಡಿ ಅವನು ಸಿಳ್ಳೆ ಹಾಕುವದನ್ನು ಕೇಳತೊಡಗಿದರು. ರಾಜೀವ ನಿಜಕ್ಕೂ ಮೆಚ್ಚುವಂತಹ ರೀತಿ ಸೀಟಿ ಹೊಡೆಯುತ್ತಿದ್ದ. ಅವತ್ತಿನ ದಿನವಂತೂ ಅವನ ಭಾವನೆಗೆ ಮೇರೆ ಇಲ್ಲದಂತಾಗಿ ಅವನ್ನು ನೋಡಿ ನಿಜವಾದ ಆನಂದವೆಂದರೆ ಇದೇಯೇನೋ ಎನಿಸುತ್ತಿತ್ತು. ಅದನ್ನು ಸ್ವತಃ ರಾಜೀವನೂ ಗಮನಿಸಿದ.
ಅನಂತರ ಕೆಲವು ಸಂವಾದಗಳಾದ ಮೇಲೆ, ಕೊನೆಯದಾಗಿ ಸಂಗೀತವನ್ನು ಹಾಕಿ ಶಿವಗುರುಗಳೂ ಸೇರಿದಂತೆ ಎಲ್ಲರೂ ಆನಂದದಲ್ಲಿ ಕುಣಿಯತೊಡಗಿದರು. ಶಿವಗುರುಗಳು ಜಗತ್ತನ್ನು ಮರೆತು ನಿಮ್ಮೊಳಗೇ ನೀವಾಗಿ ನೃತ್ಯದಲ್ಲಿ ತಲ್ಲೀನರಾಗಿ ಎಂದು ಹೇಳಿದ್ದರಿಂದ ಬರೀ ಸಂಗೀತದ ಕಡೆಗೇ ಗಮನ ಹರಿಸಿ ಅದರ ಜೊತೆಗೆ ತನ್ನಿಂತಾನೇ ಓಲಾಡುವ ತನ್ನ ದೇಹವನ್ನೂ ಗಮನಿಸುತ್ತಾ ನಿಧಾನವಾಗಿ ಕುಣಿಯತೊಡಗಿದ. ಬರಬರುತ್ತಾ ಅವನಿಗೆ ಸುತ್ತಲಿನ ಪರಿವೆಯೂ ಇಲ್ಲದಂತಾಯಿತು. ಅಷ್ಟು ದೊಡ್ಡ ಸಭಾಂಗಣದಲ್ಲಿ ತಾನೇ ಒಬ್ಬನೇ ಇರುವೆನೆಂದೆನಿಸಿತು. ಅದಾದನಂತರ ಅದೂ ಮರೆತುಹೋಗಿ ತಾನ್ಯಾರೋ. ತಾನೇಲ್ಲಿರುವೆನೋ ಎಂಬುದೇ ಗಮನಕ್ಕೆ ಬರಲಿಲ್ಲ. ಆದರೆ ಮನಸ್ಸು ಸುಪ್ತವಾಗಿ ಮತ್ತು ಪ್ರಜ್ಞಾಪೂರಕವಾಗಿ ಕೆಲಸ ಮಾಡುತ್ತಿತ್ತು. ಅಲ್ಲಿ ಕುಣಿಯುತ್ತಿರುವ ಎಲ್ಲ ಜನರ ಕೇಕೆ, ಸಂತಸದ ಆಕ್ರಂದನ ಎಲ್ಲಾ ಕೇಳುತ್ತಿತ್ತು.
ಥಟ್ಟನೆ ತಾನು ಅಲ್ಲಿ ಬಂದ ಸಂದರ್ಭ ನೆನಪಾಯಿತು!! ತಾನೊಬ್ಬ ತಾರ್ಕಿಕ ವ್ಯಕ್ತಿ. ತನಗೆಲ್ಲ ಇಂಥ ಹಿಪ್ನಾಟಿಸಂ ಥರ ಇರುವದೆಲ್ಲ ಶೋಭೆ ತರುವದಿಲ್ಲ, ತಾನು ಶಿವಗುರುಗಳನ್ನು ಮೊದಲು ನಂಬಿ ನಂತರ ಅವರ ಬಗ್ಗೆ ತನ್ನ ಗೆಳೆಯ ಮನೀಷ ಅವರ ವಿರುಧ್ಧವಾಗಿ ಹೇಳಿದ್ದನ್ನು ಖಾತ್ರಿ ಪಡಿಸಲು ಬಂದವನು. ಇದೇನು ಸಮ್ಮೋಹನಕ್ಕೆ ಒಳಗಾದವರ ರೀತಿ ಆಡುತ್ತಿದ್ದೇನೆ ಎಂದುಕೊಂಡ. ಎಲ್ಲರೂ ಕಣ್ಣು ಮುಚ್ಚಿ ಕುಣಿಯುತ್ತಿದ್ದರು. ರಾಜೀವ ಮೆಲ್ಲನೆ ಕಣ್ಣು ತೆಗದು ಇತರರನ್ನು ಮತ್ತೊಮ್ಮೆ ನೋಡಹತ್ತಿದ. ಎಷ್ಟೊಂದು ಸಂತೋಷದ ಅಲೆ ಇತ್ತು ಅಲ್ಲಿ! ಜೀವನದ ಬೇರೆ ಬೇರೆ ಕ್ಷೇತ್ರಗಳಿಂದ ಬಂದ, ಬೇರೆ ಬೇರೆ ಕೆಲಸ, ಹುದ್ದೆ ಗಳಲ್ಲಿದ್ದ ಜನರು, ವಯಸ್ಸಾದವರು, ಹೆಂಗಸರು, ಯುವಕ ಯುವತಿಯರು ಎಲ್ಲರೂ ತಮ್ಮ ತಮ್ಮ ಒತ್ತಡ, ದುಃಖ ಇತ್ಯಾದಿಗಳನ್ನು ಮರೆತು ಕುಣಿಯುತ್ತಿದ್ದರು. ಆ ಕುಣಿತದಲ್ಲಿ ನಲಿವಿತ್ತು, ಮರೆವಿತ್ತು, ಅರಿವು ಇತ್ತು, ಬರೀ ಜಗತ್ತು ಇರಲಿಲ್ಲ, ಅಂತರಿಕ್ಷವಿತ್ತು! ಇಷ್ಟೆಲ್ಲಾ ಜನರಗೆ ಷರತ್ತು ರಹಿತ ಪರಮಸುಖ ಕೊಟ್ಟಿರುವದರ ಹಿಂದೆ ಶಿವಗುರುಗಳ ಸ್ವಾರ್ಥ ಏನಾದರೂ ಇದ್ದೀತು? ತನ್ನಂಥ ಇಲ್ಲಾ ತನಗಿಂತಲೂ ಜಾಣ ಜಾಣೆಯರಿರುವ ಇಂಥ ದೊಡ್ಡ ಸಮಾವೇಷದಲ್ಲಿ ಒಬ್ಬರೋ ಇಬ್ಬರೋ ಮರಳು ಹೋದರೆ ಸರಿ, ಎಲ್ಲಕ್ಕೆಲ್ಲಾ (ತನ್ನನ್ನೂ ಸೇರಿ) ಹೋಗುವದು ಹೇಗೆ ಸಾಧ್ಯ? ಇದ್ದಕ್ಕಿದ್ದಂತೆ ಇವನ್ನೆಲ್ಲಾ ನೋಡಿ ಧೀರ್ಘ ಟ್ರಾನ್ಸ್ನಲ್ಲಿದ್ದ ರಾಜೀವನ ಕಣ್ಣಲ್ಲಿ ಬಳಬಳನೆ ಕಣ್ಣೀರು ಹರಿಯತೊಡಗಿದವು. ಅದೇನು ಆನಂದವೋ, ಉನ್ಮಾದವೋ, ದುಃಖವೋ ತಿಳಿಯದೆ ಹಾಗೆ ಸುಮಾರು ಹೊತ್ತು ಅಳುತ್ತಲೇ ಹೋದ. ಇವನ ಕಡೆ ಯಾರಿಗೂ ಗಮನವಿರಲಿಲ್ಲ. ಎಲ್ಲರೂ ತಮ್ಮ ಪಾಡಿಗೆ ತಾವು ಕುಣಿಯುತ್ತ ಹೋಗುತ್ತಿದ್ದರು. ಸಾಕಷ್ಟು ಹೊತ್ತು ಆದಮೇಲೆ ಸಂಗೀತ ಶಾಂತವಾಯಿತು. ಎಲ್ಲರೂ ಸುಸ್ತಾಗದ್ದರೂ ಮುಖದಮೇಲೆ ಕಳೆ ಇತ್ತು. ಏನೋ ಸತ್ಯದ ಅರಿವು ಆದ ಸಂತೋಷವಿತ್ತು. ರಾಜೀವನ ಮುಖದಲ್ಲೂ ಸಹ. ಇಷ್ಟು ದಿನ ಅವನು ಅತ್ತಿದ್ದು ಬರೀ ನೋವಾದಾಗ ಮಾತ್ರ, ತನ್ನ ಸ್ವಾರ್ಥದ ಕಾಲು ಮುರಿದಾಗ ಮಾತ್ರ. ಆದರೆ ಇವತ್ತು ಹಾಗಾಗಿರಲಿಲ್ಲ. ಅವನು ಅತ್ತಿದ್ದು ಯಾಕೆ ಎಂದು ಅವನಿಗೆ ಮಾತ್ರ ಗೊತ್ತಾಗಿತ್ತು.
ಕಾರ್ಯಕ್ರಮದ ಕೊನೆಯ ಅಂಗವಾಗಿ ಪ್ರಶ್ನೋತ್ತರ ಸೆಷನ್ನು ಇತ್ತು. ಕೆಲವು ಜನ ಹಲವಾರು ಪ್ರಶ್ನೆ ಶಿವಗುರುಗಳಿಗೆ ಕೇಳಿ ಅವರು ಮನದಟ್ಟಾಗುವಚಿತೆ ಸುಧೀರ್ಘವಾಗಿ ಉತ್ತರಿಸಿದ ಬಳಿಕ ಇವನೂ ಕೈ ಎತ್ತಿದ. ಮೈಕು ಬಂತು. ರಾಜೀವ ಪ್ರಶ್ನೆ ಕೇಳುವದನ್ನೇ ಮರೆತು ಶಿವಗುರುಗಳನ್ನೇ ದಿಟ್ಟಿಸಿ ನೋಡುತ್ತಾ ನಿಂತ. ಅತೀತ ಏನನ್ನೋ ಕೇಳ ಬಯಸಿತ್ತು, ಭವಿಷ್ಯದ ಬಇಸಿಲಗುದುರೆಯೇರಿ ವರ್ತಮಾನ ಮುಗುರಿ ಬಿದ್ದಿತ್ತು. ಮನಸ್ಸು, ಬುಧ್ಧಿಗಳ ನಡುವಿನ ಅನ್ಯೋನ್ಯತೆ ತಪ್ಪಿ ಹೋದಂತಿತ್ತು. ಧೈರ‍್ಯ ಮಾಡಿ ಕ್ಷೀಣ ಧ್ವನಿಯಲ್ಲಿ ಕೇಳಿದ. ಸತ್ಯವೆಂದರೇನು? ಗುರುಗಳು ಮೌನವಾದರು. ಎಲ್ಲೆಲ್ಲೂ ಮೌನ. ತಾವಿರುವದರ ಬಗ್ಗೆಯೇ ಸಂಶಯವಾಗುವಂತಹ ಭೀಷಣವಾದ ಮೌನ.
ಎಲ್ಲರೂ ಯಾವಾಗ ಎದು ಹೋದರೋ ರಾಜೀವನಿಗೆ ಗೊತ್ತಾಗಲಿಲ್ಲ. ತಾನೊಬ್ಬನೇ ಬಹಳ ಹೊತ್ತು ಅಲ್ಲಿಯೇ ಕುಳಿತಿದ್ದ.
----------------------------------------------------------------------------------------------------------
![](//1.bp.blogspot.com/-Xb6MfeKX_3g/UvC-CO_47tI/AAAAAAAAEy0/qUFYMBNYwsw/s1600/Sadhguru-Mystic-Rasa-Vaidya-06-20110302_IQB_0016-e.jpg)