Monday, 14 April 2014

ನನ್ನವಳು ಆಗಬೇಕಿದ್ದವಳು

ನಾ ಕೈ ತೂರಿ ಗುಡ್ಡೆ ಮಾಡಿದ
ಮರಳು ಮನೆಯಲ್ಲಿ
ಕಿರುಬೆರಳು ಹಾಕಿ
ಬೆಳಕಿಂಡಿ ಮಾಡಿದವಳು
ಜೊತೆಗೇ ಕಚಗುಳಿ ಇಟ್ಟವಳು

ನಾ ಬಿಟ್ಟ ಕಾಗದದ ದೋಣಿ
ಮುಂದೆ ಸಾಗಿಸಲು
ಬೆರಳ ಹುಟ್ಟು ಹಾಕಿದವಳು
ಅದು ಕೊಚ್ಚಿ ಹೋಗಲು
ಮಳೆಯಲ್ಲಿ ನನ್ನ ಕಣ್ಣೊರೆಸಿದವಳು

ಕುಂಟಾಟ ಆಡುವಾಗ
ಬೇಕೆಂತಲೇ ಕೈಗೆ ಸಿಕ್ಕಿ
ನನ್ನ ಕೈಗೂ ಮನಸ್ಸಿಗೂ
ಮುದಗೊಳಿಸಿದವಳು
ಕೈ ಕೊಸರಿಕೊಳ್ಳುವ
ಹುಸಿ ಕೋಪ ತೋರಿಸಿದವಳು

ಹರೆಯದ ಹುಚ್ಚು ಹಿಡಿಸಿ
ಕಣ್ಣಿಂದಲೇ ಜೀವ ಮಿನುಗಿಸಿದವಳು
ಪ್ರಾಣ ನನ್ನಲ್ಲಿದೆಯೋ ಅವಳಲ್ಲಿದೆಯೊ
ಅರಿವು ಮರೆಸಿದವಳು

ನನ್ನವಳು ಆಗಬೇಕಿದ್ದವಳು
ಕನಸಿನಲ್ಲೇ ಉಲಿದವಳು
ಬದುಕ ಮಾಯೆ, ಸೊಬಗಿನ ಜೊತೆ
ಮನಸಿನಲ್ಲೇ ಉಳಿದವಳು

-VV


1 comment: