Tuesday, 27 October 2015

ಅಖ್ಲಾಕ್

(ಈ ಕಥೆಯ ಪಾತ್ರ, ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದರೆ ಚೆನ್ನ, ಎಂದು ಹಾರೈಸಿ..)
ಅಖ್ಲಾಕ್:
ಆತ್ಮಹತ್ಯೆಯ ಮೆಟ್ಟಿಲೇರಿ ಅದಾಗಲೇ ಬಂಡೆಪ್ಪ ಇಳಿದಾಗಿತ್ತು. ಎರಡು ಮಕ್ಕಳ ಪಾಪದ ಮುಖಗಳು ತನ್ನ ಕರ್ತವ್ಯವನ್ನು ಪದೇ ಪದೇ ನೆನಪಿಸಿಕೊಡುತ್ತಿದ್ದವು. ಕಳೆದ ವರ್ಷದ ಹಾಗೆ ಈ ವರ್ಷವೂ ಇರುವ ಒಂದೇ ಒಂದು ಎಕರೆಯ ಹೊಲ ಬರಡಾಗಿತ್ತು. ಇದ್ದ ಒಂದು ಹಸುವನ್ನು ಸಾಲ ತೀರಿಸಲು ಯಾವಾಗಲೋ ಮಾರಿಯಾಗಿತ್ತು. ಕೊಟ್ಟ ಸಾಲ ಕೇಳಲು ಊರ ಗೌಡ ಹಲವಾರು ಬಾರಿ ಧಮಕಿ ಕೊಟ್ಟಿದ್ದ. ಅವನೇನಾದರೂ ಅಸಲಿಗೇ ಕೊಲ್ಲಿಸಿದರೂ ಅವನ ಕೈಯಲ್ಲಿ ಸಾಯುವದಕ್ಕಿಂತ ತಾನೇ ತನ್ನ ಪ್ರಾಣ ತೆಗೆದುಕೊಳ್ಳುವದು ಒಳ್ಳೆಯದೆನಿಸಿತ್ತು.
ಆದರೆ ಅದೆಲ್ಲಿಂದಲೋ ಕೇಳಿದ್ದ, ಪಕ್ಕದ ಊರಿನ ಸಿರಿವಂತ ಹೆಂಗಸೊಬ್ಬಳು ತನ್ನ ಹುಟ್ಟುಹಬ್ಬಕ್ಕೆ ಗೋದಾನ ಮಾಡುತ್ತಿದ್ದಾಳೆಂದೂ, ತನ್ನ ಅದೃಷ್ಟವಿದ್ದರೆ ತನಗೂ ಒಂದು ಹಸು ಸಿಗಬಹುದೆಂದೂ. ಹೊಲಕ್ಕಾಗದಿದ್ದರೆ ತನ್ನ ಮಕ್ಕಳಿಗಾದರೂ ಹಾಲಿನ ಭಾಗ್ಯ ಸಿಗಬಹುದೆಂದು, ತನ್ನ ಅದೃಷ್ಟ ಪರಿಶೀಲಿಸಲು ಆ ಊರಿಗೆ ಬೆಳಿಗ್ಗೆಯೇ ಹೋಗಿದ್ದ.
ತನಗೇ ನಂಬಿಕೆಯಾಗದಂತೆ ಆ ಹೆಂಗಸು ಇವನನ್ನು ಆದರದಿಂದ ಮಾತನಾಡಿಸಿ ವಿಧಿವಿಧಾನದಿಂದ ಗೋಪೂಜೆ ಮಾಡಿ ಅದನ್ನು ದಾನವಾಗಿ ಇವನಿಗೆ ಕೊಟ್ಟಳು. ಇಷ್ಟು ದಿನಗಳಲ್ಲಿ ಅವನಿಗೆ ನಂಬಿಕೆಯ ಕಿರಣ ಕಂಡಿದ್ದು ಮೊದಲಬಾರಿಗೆ. ಹುಮ್ಮಸ್ಸಿನಿಂದ ಹಸುವನ್ನು ಇನ್ನು ತನ್ನ ಊರಿಗೆ ಸಾಗಿಸುವದು ಹೇಗೆಂದು ಬಂಡೆಪ್ಪ ವಿಚಾರಿಸಹತ್ತಿದ.
ಹೀಗೆಯೇ ವಿಚಾರಿಸಲು, ಅದ್ಯಾವದೋ ಒಂದು ಟ್ರಕ್ಕು ಇನ್ನಷ್ಟು ಸ್ವಲ್ಪ ಹಸುಗಳನ್ನು ಹೊತ್ತುಕೊಂಡು ತನ್ನ ಊರಿನ ಮೇಲೆಯೇ ಹಾಯ್ದು, ಮುಂದೆ ಹೋಗುತ್ತಿರುವದು ಗೊತ್ತಾಯಿತು. ಸರಿ, ಹಿಂದೆ ಮುಂದೆ ನೋಡದೆ ಡ್ರೈವರನ ಕೈಯಲ್ಲಿ ತನ್ನ ಕೊನೆಯ ಐನೂರರ ನೋಟನ್ನು ತುರುಕಿ, ಅವನ ಕೈಯನ್ನು ಕಣ್ಣಿಗೆ ಒತ್ತಿಕೊಂಡು ತನ್ನನ್ನೂ, ತನ್ನ ಹಸುವನ್ನೂ ಊರಿಗೆ ತಲುಪಿಸೆಂದು ಅಂಗಲಾಚಿದ. ಅದ್ಯಾಕೋ ಆ ಡ್ರೈವರನ ವಕ್ರ ನಗು ಇವನು ಗಮನಿಸಲೇ ಇಲ್ಲ.
ಊರು ಹತ್ತಿರವಿರಬಹುದು. ಆ ಸಣ್ಣ ಘಾಟ್ ಬಂದಾಗಲೇ ಬಂಡೆಪ್ಪನಿಗೆ ಎಚ್ಚರವಾಗಿತ್ತು. ಡ್ರೈವರ್ ತನ್ನ ಗುಂಗಿನಲ್ಲಿ ಗಾಡಿ ಓಡಿಸುತ್ತಿದ್ದು, ಮುಂದೆ ಒಮ್ಮೆಲೇ ಬಂದ ತಿರುವನ್ನು ನೋಡದೆ ಸರಕ್ಕನೆ ತಿರುಗಿಸಲು ನೋಡಿ ಪಕ್ಕದ ಮರಕ್ಕೆ ಗುದ್ದಿದ್ದ. ಹಿಂದೆ ನಿಂತ ಹಸುಗಳು ಕಿರಿಚಿಕೊಂಡವು. ಕ್ಯಾಬಿನ್ ನಲ್ಲಿ ಕುಳಿತ ಇವರೀರ್ವರಿಗೂ ಸ್ವಲ್ಪ ಗಾಯ ಆಯಿತು. ಹೇಗೋ ಸುಧಾರಿಸಿಕೊಂಡು ಹೊರಗಿಳಿದು ಹಿಂದೆ ಬಂದು ನೋಡಲಾಗಿ, ಇವನ ಹಸುವಿನ ಹಸುವಿನ ಕಾಲಿಗೆ ತುಂಬಾ ರಕ್ತ ಬಂದು ಸೋರಲಾರಂಭಿಸಿತ್ತು. ಇನ್ನೇನು ಊರು ಬಂದೇಬಿಟ್ಟಿದೆಯಲ್ಲ, ಮನೆಗೆ ಹೋಗಿ ಅದಕ್ಕೆ ಆರೈಕೆ ಮಾಡಿದರಾಯಿತು ಎಂದು ಡ್ರೈವರ್ ನಿಗೆ ಹೊರಡಲು ಅವಸರ ಮಾಡಿದ. 
ತುಸು ದೂರ ಬಂದಿರಬಹುದು, ಗಾಡಿಯ ಬೆಳಕಿನಲ್ಲಿ ಕೆಲವು ಜನರು ರಸ್ತೆಗೆ ಅಡ್ಡ ನಿಂತು ಗಾಡಿ ನಿಲ್ಲಿಸಲು ಕೈ ಮಾಡುತ್ತಿರುವದು ಕಾಣಿಸಿತು. ಇವರು ಗಾಡಿ ನಿಲ್ಲಿಸಿದಾಗ ಒಬ್ಬಿಬ್ಬರು ಹಿಂದೆ ಹೋಗಿ ಅದೇನೋ ಪರಿಶೀಲಿಸಿದರು. ಬಂಡೆಪ್ಪನಿಗೆ ಒಮ್ಮೆಲೇ ಕೆಲವು ಸಂಗತಿಗಳು ಮನಕ್ಕೆ ಅಪ್ಪಳಿಸಿದವು. ಇತ್ತೀಚಿಗೆ ಹಸುಗಳನ್ನು ಸಾಗಿಸುವದನ್ನು ಸಂಶಯದಿಂದ ನೋಡಲಾಗುತ್ತಿದೆಯೆಂದೂ, ಅದು ಕಸಾಯಿ ಖಾನೆಗೇ ಕರೆದೊಯ್ಯಲಾಗುವುದೆಂದು ಜನರು ಭಾವಿಸುವರೆಂದೂ ಮತ್ತು ಅದಾಗಲೇ ಆದ ಅಪಘಾತದಲ್ಲಿ ತನ್ನ ಹಸುವಿನ ಕಾಲಿಗೆ ನೋವಾಗಿ ರಕ್ತ ಸೋರಲಾರಂಭಿಸಿದ್ದು. ತಕ್ಷಣ ಏನೋ ಹೊಳೆದು ಗಡಗಡ ನಡುಗಲಾರಂಭಿಸಿದ. ತನ್ನನ್ನೂ ಕಸಾಯಿ ಎಂದು ಇವರು ಭಾವಿಸಿದರೆ? ಆ ಕಲ್ಪನೆಯೇ ಅವನ ಬೆನ್ನ ಹುರಿಯನ್ನು ಕಂಪಿಸುವಂತೆ ಮಾಡಿತು. ಅದೆಲ್ಲೋ ಉತ್ತರದಲ್ಲಿ ಆದ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದ. ಅಷ್ಟೊತ್ತಿಗಾಗಲೇ ಅವರು ಅವನನ್ನು ಗಾಡಿಯಿಂದ ಹೊರಗೆಳೆದಿದ್ದರು. ಯಾವನೋ ನೀನು, ಎಲ್ಲಿಗೆ ಹೋಗ್ತಾ ಇದ್ದೀಯಾ ಸೂ ಮಗನೆ.... ಇತ್ಯಾದಿ ಬೈಗಳುಗಳು ಇವನ ಕಿವಿಯಲ್ಲಿ ಬಂದು ಅಪ್ಪಳಿಸಹತ್ತಿದವು. 
ತಾನು ಕಸಾಯಿಯಲ್ಲ ಎಂದು ಅವರಿಗೆ ಮನವರಿಕೆ ಮಾಡಲೆಂದು ಕನಸಲ್ಲಿ ಉಚ್ಚರಿಸುವಂತೆ ಗಾಯತ್ರಿ ಮಂತ್ರ ಪಠಿಸಿ ತೋರಿಸಹತ್ತಿದ. ಜೊತೆಗೆ ಎಲ್ಲ ದೇವರ ನಾಮವನ್ನೂ ಹುಚ್ಚು ಹಿಡಿದವರ ಹಾಗೆ ಕೂಗುತ್ತ ಕುಣಿಯತೊಡಗಿದ. ಅವನಿಗೆ ಆದ ಭಯಕ್ಕೆ ಅವನು ಇಷ್ಟೆಲ್ಲಾ ಮಾಡುತ್ತಿರುವದು ಒಂದು ಪವಾಡವೇ ಸರಿ. ಆದರೆ ಅವರಿಗೇಕೋ ಇವನು ಮಾಡುತ್ತಿರುವದು ಇಷ್ಟವಾದ ಹಾಗೆ ಕಾಣಲಿಲ್ಲ. ಆ ಡ್ರೈವರ್ರೂ ಅವರಲ್ಲಿ ಒಬ್ಬನಾಗಿ ಹೋದಂತಿದ್ದ. ಆವಾಗಲೇ ಅವನು ಆ ಡ್ರೈವರ್ ನನ್ನು ಸರಿಯಾಗಿ ಗಮನಿಸಿದ್ದು. ತಕ್ಷಣ ತಾನು ಗಾಯತ್ರಿ ಮಂತ್ರ, ದೇವರ ನಾಮ ಜಪಿಸಿದ ತಪ್ಪಿನ ಅರಿವಾಯಿತು. ಆ ಜನರೆಲ್ಲಾ ಸೇರಿ ಬಂಡೆಪ್ಪನನ್ನು ಹಿಗ್ಗಾ ಮುಗ್ಗಾ ಥಳಿಸತೊಡಗಿದರು. ಆ ಹೊತ್ತಿನಲ್ಲಿ ಬುಲೆಟ್ ಶಬ್ದ ಹತ್ತಿರವಾದಂತೆ ಕೇಳಿಸಿತು. ತಕ್ಷಣ ಇವನನ್ನು ಹೊಡೆಯುತ್ತಿರುವವರೆಲ್ಲ ಪರಾರಿಯಾದರು. ಬಂಡೆಪ್ಪನಿಗೆ ಇದಾಗಲೇ ಸುಮಾರು ಏಟು ಬಿದ್ದಿದ್ದು, ಅವನ ಪ್ರಜ್ಞೆ ತಪ್ಪಲಾರಂಭಿಸಿತ್ತು. ಹತ್ತಿರ ಬಂದ ಬೂಟುಗಳ ಸಪ್ಪಳ ಕಿವಿ ಮೇಲೆ ಬೀಳುತ್ತಿತ್ತು ಅಷ್ಟೇ ಹೊರತು ಆ ಬೂಟುಗಳನ್ನು ಹಾಕಿ ಕೊಂಡವರ್ಯಾರು ಎಂದು ನೋಡಲು ಕಣ್ಣನ್ನು ತೆರೆದಿಡಲಾಗದೇ ಬಂಡೆಪ್ಪ ಅಲ್ಲಿಯೇ ಕುಸಿದ. 
******
ಪ್ರಜ್ಞೆ ಬಂದು ಕಣ್ಣು ತೆರೆದು ಸುತ್ತಲೂ ನೋಡಿದಾಗ ಆಸ್ಪತ್ರೆಯಂತಿತ್ತು. ತಾನು ಮಂಚದ ಮೇಲೆ ಮಲಗಿರುವದು, ತನ್ನ ಮೈತುಂಬ ಬ್ಯಾಂಡೇಜ್ ಹಾಕಿರುವದು ಗೊತ್ತಾಯಿತು. ಕಷ್ಟದಿಂದ ಪೂರ್ತಿ ಕಣ್ಣು ತೆರೆದು ಸುತ್ತಲೂ ನೋಡಿದ. ಪಕ್ಕದಲ್ಲಿ ಒಬ್ಬ ಇನ್ ಸ್ಪೆಕ್ಟರ್ ಕುಳಿತಿದ್ದ. ಇವನು ಕಣ್ತೆರೆಯುವದನ್ನು ನೋಡಿ, ಈಗ ಹೇಗಿದ್ದೀರಾ, ಮೈಗೆ ಹುಶಾರಾಗಿದೆಯೇ, ನಾನೇ ನಿಮ್ಮನ್ನು ಇಲ್ಲಿ ದಾಖಲಿಸಿದ್ದು, ನಿಮ್ಮ ಆರೈಕೆಯನ್ನು ಸರಕಾರ ನೋಡಿಕೊಳ್ಳುತ್ತೆ, ತಾವು ಯಾವುದೇ ರೀತಿಯ ಯೋಚನೆ ಮಾಡಬಾರದೆಂದು ಮುಗುಳ್ನಗುತ್ತಾ ಹೇಳಿದ. ತನಗೇಕೆ ಅವರು ಹೊಡೆದರು ಎಂದು ವಿಚಾರಿಸಿದಾಗ, "ನೋಡಿ ಇವರೇ, ಸಮಾಜದಲ್ಲಿ ಕೆಲವು ಸಮಾಜವಿರೋಧಿ ಜನರು ಯಾರನ್ನೋ ಬಲಿಪಶು ಮಾಡಿ ಅವರ ಬಲಿಯನ್ನು ತಮ್ಮ ಸ್ವಾರ್ಥಕ್ಕೋಸ್ಕರ ತೆಗೆದುಕೊಳ್ಳುತ್ತಾರೆ. ನಿಮ್ಮ ವಿಷಯದಲ್ಲೂ ಹಾಗೆ ಆಗುತ್ತಿತ್ತು, ನಾನು ಸಮಯಕ್ಕೆ ಸರಿಯಾಗಿ ಆ ಕಡೆಯಿಂದ ಹೋಗುತ್ತಿದ್ದೆ, ನನ್ನನ್ನು ನೋಡಿ ಅವರೆಲ್ಲ ಓಡಿಹೋದರು" ಎಂದ. ಬಂಡೆಪ್ಪನಿಗೇನೂ ಅರ್ಥವಾಗಲಿಲ್ಲ. 
"well-done myboy! ಒಳ್ಳೆಯ ಸಮಯಕ್ಕೆ ಹೋಗಿ ನೀನು ಈ ಬಡ ರೈತನ ಜೀವನ ಉಳಿಸಿದ್ದೀಯ, ಇಲ್ಲದಿದ್ದರೆ ಆ ಹಂತಕರು ಇವನನ್ನು ಮುಗಿಸಿ ಅವನ ಹಸುವಿನಜೊತೆಗೆ ಪರಾರಿಯಾಗುತ್ತಿದ್ದರೆನೋ. ನಂತರ ಕಸಾಯಿ ಖಾನೆಗೆ ಸಾಗಿಸುವ ವ್ಯಕ್ತಿಯ ಬರ್ಬರ ಹತ್ಯೆ ಎಂದು ಸುದ್ದಿಯಾಗುತ್ತಿತ್ತು. ಆ ಸುದ್ದಿಯನ್ನು ಎರಡೂ ಕೋಮಿನವರು ತಮ್ಮ ಮನಸ್ಸಿಗೆ ಬಂದಂತೆ ಬಳಸುತ್ತಿದ್ದರು" ಆ ಇನ್ ಸ್ಪೆಕ್ಟರಿನ ಮೇಲಿನ ಅಧಿಕಾರಿ ಇರಬಹುದು, ಅದೇ ತಾನೇ ತಾನಿದ್ದ ಮಂಚದ ಕಡೆಗೆ ಬಂದು ಇನ್ ಸ್ಪೆಕ್ಟರಿನ ಬೆನ್ನು ಚಪ್ಪರಿಸಿ "well-done ಅಖ್ಲಾಕ್ myboy, well-done !" ಎನ್ನುತ್ತಿದ್ದರು.



No comments:

Post a Comment