Wednesday, 22 May 2013

ಹೀಗೊಂದು ರಾತ್ರಿ :

ಇವತ್ತಿನ ರಾತ್ರಿ ವಿಶಿಷ್ಟವಾಗಿತ್ತು. ಹೊರಗಡೆ ಮಳೆ, ಸಿಡಿಲನ ಆರ್ಭಟ. ಎಲ್ಲೋ ಒಂದೆಡೆ ಒಲವು ಮಗ್ಗುಲನ್ನು ಬದಲಿಸಿತ್ತು. ದೂರದ ಮುಗಿಲಲ್ಲಿ ಎರಡು ಮೋಡಗಳು ಸಂಧಿಸಿದ ಹೊತ್ತು. ಅದು ಅಪ್ಪಿಗೆಯೋ, ದೂರವಾಗಿದ್ದ ಸಂಬಂಧದ ದೂರಿನ ಮೊರೆಯೋ, ಕೇಳಲು ಹಿತಕರವಾಗಿತ್ತು. ಒಂದು ಮೋಡ ಕೂಗಿ ಹೇಳಿದಂತೆ "i am in love" ಜೊತೆಗೆ ಇನ್ನೊಂದು ಮೋಡ ಧ್ವನಿಗೂಡಿಸಿದಂತೆ, ಧ್ವನಿ ಬಾನಿನಲ್ಲಿ ಮೊಳಗಿದಾಕ್ಷಣ ಅವರೀರ್ವರ ಕಣ್ಗಳು ಮಿಂಚಿದಂತೆ, ಮಿಂಚಿನ ಜೊತೆಗೆ ಪ್ರೀತಿಯ ಹೊನಲು ಹರಿದಂತೆ, ಹರಿದು ತಮ್ಮಂತೆಯೇ ಮಿಡಿದು ಬಳಲುತ್ತಿರುವ ಹಲವಾರು ಹೃದಯಗಳಿಗೆ ತಂಪು ಹೊಯ್ದಂತೆ ಇನ್ನೂ ಏನೇನೋ ಭಾಸವಾಗುತ್ತಿತ್ತು.

ಬಾಲ್ಕನಿಯಲ್ಲಿ ಕುಳಿತಿರುವ ಜೋಡಿಗೆ ಇಂದು-ಹಿಂದೆಂದೂ ಬರಬಾರದಾಗಿತ್ತೆ ಎನ್ನುವ ಮರುಗು, ಬಂದಾಯ್ತಲ್ಲ ಎನ್ನುವ ಮುಜುಗರದ ಉಲ್ಲಾಸ. ಬಾಲ್ಕನಿ ಚಿಕ್ಕದಾಗಿರುವದರಿಂದ ಕಾಲು ಬಾಲ್ಕನಿಯಿಂದಾಚೆ ಹೊರ ಹಾಯ್ದಿದ್ದವು. ಅವರಿಬ್ಬರ ಕಾಲುಗಳಿಗೆ ಪಟ ಪಟ ಸಿಡಿಯುವ ಪುಟಾಣಿ ಹನಿಗಳು. ತಮ್ಮ ಹಸಿ ಕಾಲನ್ನು ಇನ್ನೊಬ್ಬರ ಹಸಿ ಕಾಲಿಗೆ ತಾಕಿಸಿ ಅವರಿಗೆ ಚಳಿ ಮುಟ್ಟಿಸಿ ಕಾಲು ಒರೆಸಿಕೊಳ್ಳುವ ತುಂಟಾಟ. ಬೊಗಸೆಯಲ್ಲಿ ಸಾಲಿದಷ್ಟೂ ಹನಿಗಳನ್ನೆತ್ತಿ ಇನ್ನೊಬ್ಬರ ಮುಖಕ್ಕೆರಚುವ ಚೆಲ್ಲಾಟ. ಜಗತ್ತಿನ ಸುಖವೆಲ್ಲ ಈ ರಾತ್ರಿಯ ಮಳೆಯಾಗಿ ಸುರಿದರೆ ಆ ಮಳೆಯನ್ನು ಬೊಗಸೆಯಲ್ಲಿ ತುಂಬಿಕೊಳ್ಳುವ ಹುಡುಗಾಟ.

ಗಾಳಿ ಹರಿದು ಮಳೆಯನ್ನೀಚೆ ಹೊಯ್ದಾಗ ಮುಖಕ್ಕೆ ಸಿಡಿಯುವ ಹನಿಗಳು ಅದ್ಯಾವ ದುಃಖದ ಕಣ್ಣೀರನ್ನು ಒರೆಸಿದವೋ, ಅದ್ಯಾವ ಆನಂದಬಾಷ್ಪಗಳ ಜೊತೆಗೆ ಸಮ್ಮಿಲಿತವಾದವೊ, ಆ ಹನಿಗಳಿಗೇ ಗೊತ್ತು. ಒಮ್ಮೆಲೇ ಉಕ್ಕುವ ದುಃಖ, ದುಗುಡದ ರೋದನೆ, ಸಿಡಿಲಿನ ಅಬ್ಬರದ ಜೊತೆಗೂಡಿ ಗಹಗಹಿಕೆಯ ನಗುವಾದದ್ದು ಬಹುಶಃ ಅವರಿಗೂ ಕೇಳಿಸಿರಲಿಕ್ಕಿಲ್ಲ. ಅವಾಗ್ಗೊಮ್ಮೆ ಇವಾಗ್ಗೊಮ್ಮೆ ಅವಳು ಇವನನ್ನು ಹೊಡೆದು, ಗುದ್ದಿ, ಸರಿಯಾಗಿ ಮೋಡದ ಥರಾನೇ, ಇದಕ್ಕಿಂತ ಬೇಗ ಇನ್ನು... ಸಿಗಬಾರದಿತ್ತೇ ನೀನು... ಇನ್ನಾದರೂ ಕೂಡಿಟ್ಟುಕೊ, ನೀ ನನ್ನನೂ ಎಂದದ್ದೆ ಬಂತು...

ವ್ಹಿಸ್ಕಿಯ ಹರಿವು ಬಿಸಿಯುಸಿರನ್ನು ಇನ್ನಷ್ಟು ಬಿಸಿಮಾಡಿ ಚಳಿಯಿಂದ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿತು. ಈಗಾಗಲೇ ಕದ ತಟ್ಟಿದ ನಿದ್ರಾದೇವಿಯನ್ನು ಬರಮಾಡಲು ಒಳಗಡೆ ಹೋದೆ. - VV



No comments:

Post a Comment