Monday, 27 January 2014

ಬೆಳದಿಂಗಳ ರಾತ್ರಿ

ನಿನ್ನೆಯೂ ಎಂದಿನ ಹಾಗೆ ಬಾಲ್ಕನಿ ಯಲ್ಲಿ ಕಳೆದಿತ್ತು ರಾತ್ರಿ
ಬೆಳದಿಂಗಳ ಘಮದಲ್ಲಿ, ಬಾಗಿಲಲ್ಲಿ ನಿಂತ ನಿನ್ನ ಕಾಲ್ಗೆಜ್ಜೆ ಕೇಳಿಸಲೇ ಇಲ್ಲ.

ನನ್ನಾಸೆಗಳನ್ನು ನಿನ್ನಿಂದಾಚೆಯ ಚಂದ್ರನಿಗೆ ಕಳಿಸುತ್ತಿದ್ದೆ
ಅವು ಅವನ ಮೇಲೆ ಪುಟಿದು ಮರಳಿ ಬಂದವೇ?
ಯಾರ ಕೈಗೊ ಸಿಕ್ಕಿ ಅವರ ಧ್ವನಿ ಮಾರ್ದನಿಸುವದ ಕೇಳಿದೆ

ಕಾದ ಹಂಚಿಗೆ ನೀರು ಹುಯ್ಯುವ ನಿನ್ನ ನಗೆ
ಅದೊಂದು ದಿನ ಬಿಸಿಲ್ಗುದುರೆಯಾಗಿ ಕಂಡಿತ್ತು
ಸಹಾರಾದಲ್ಲಿ ಬಾಯಾರಿದವರಿಗೇನು ಕಡಿಮೆ?

ನನ್ನನ್ನಾಚೆ ದಬ್ಬಿದವಳು ನೀನಲ್ಲ, ನನ್ನ ಮೋಹದ ಬಲೆ
ಹುಚ್ಚು ಹುಡುಗಿ ನೀನೇಕೆ ಕ್ಷಮೆ ಕೇಳುತ್ತೀಯೆ?

ಕ್ಷಮಿಸು ಬಿಡು ನನ್ನ, ಕನಸು ತೋರಿದ್ದಕ್ಕೆ
ನನ್ನ ಕನವರಿಕೆಯೇ ಬೇರೆ, ತಡವಾಗಿ ಅರಿತುಕೊಂಡೆ

ಜೊತೆಯಾಗಿ ಬರಬೇಕಾದಲ್ಲಿ ಬಿಟ್ಟು ಬಾ,
ಎಲ್ಲವನ್ನೂ, ಎಲ್ಲರನ್ನೂ; ನನ್ನನ್ನೂ, ನಿನ್ನನ್ನೂ

ಹರಡಿಬಿಡೋಣ ನಿನ್ನೆಯ ಬೆಳದಿಂಗಳದಂತೆಯೇ
ಪ್ರೇಮಿಗಳ ನಿದ್ರೆ ಕೆಡಿಸಿ ಅವರನ್ನು ಎಚ್ಚರಿಸೋಣ
ಮತ್ತೆ ಮಲಗಲು, ಸುಪ್ತವಾಗಲ್ಲ, ಎಚ್ಚರದಿಂದ ಕಣ್ಮುಚ್ಚಲು.

- VV


No comments:

Post a Comment