ನನಗೆ ಸರಿಯಾಗಿ ನೆನಪಿಲ್ಲ
ತಿಳಿಯಲೂ ಇಲ್ಲ
ಕೂಸಾಗಿದ್ದೆ, ಬರೀ ಅಳುವೇ ನನ್ನ ಭಾಷೆ
ಕಣ್ಣು ಮಂಜು ಮಂಜು
ಅದಾಗ ಮೊದಲ ಬಾರಿ
ಅಪ್ಪ ಹಿಡಿದ ಕನ್ನಡಿ ನೋಡಿದ್ದೆ
ಹುಡುಗನಾದಾಗಲೂ ಅಷ್ಟೇ
ಕನ್ನಡಿ ನೋಡುವದು
ಕ್ರಾಪ್ ತಿದ್ದಿಕೊಳ್ಳಲಿಕ್ಕೆ ಮಾತ್ರ
ನನ್ನ ಕಣ್ಣಿನ ಬಣ್ಣವನ್ನೂ
ನೋಡಲಿಲ್ಲ ನಾನು
ಅಪ್ಪ ಕನ್ನಡಿ ಹಿಡಿದು ಓಡುತ್ತಿದ್ದ
ಬರಬರುತ್ತಾ ನಾನು ಬೆಳೆದ್ಹಾಗೆ
ಕನ್ನಡಿಯೂ ದೊಡ್ಡದಾಗುತ್ತಾ ಹೋಯಿತು
ಆದರೆ ಕಾಣುತ್ತಿದ್ದುದು ಮುಖ ಮಾತ್ರ
ಯೌವ್ವನ ದಲ್ಲಿ ಕೆಲವರು
ಪಕ್ಕಕ್ಕೆ ಬಂದು ನಿಂತರು
ಪರಿಚಯವೂ ಕೂಡ
ಪರಸ್ಪರ ಕನ್ನಡಿಯಲ್ಲಿ ಮುಖ
ನೋಡಿಕೊಳ್ಳುವದರಲ್ಲೇ.
ಆಗದವರು ಮಾತ್ರ
ಇದಿರು ನಿಂತವರು
ಅವರ ಬೆನ್ನು ಮಾತ್ರ ನನಗೆ ಕಂಡಿತ್ತು
ಅವರಿಗೆ ಕನ್ನಡಿಯಲ್ಲಿನ ನನ್ನ ಮುಖ
ಕಾಣಲೇ ಇಲ್ಲವೇನೋ
ಅಪ್ಪ ಹಿಂದೆ ಉಳಿಯ ಹತ್ತಿದ
ಅವನು ಹಿಡಿದ ಕನ್ನಡಿಯೂ
ಎಲ್ಲಿ ಹೋದಲ್ಲೂ ಕನ್ನಡಿ
ಅದರ ಜೊತೆಗಿನ ಅಪ್ಪ
ಕೆಲವೊಮ್ಮೆ ಹಿಂದೆ
ಕೆಲವೊಮ್ಮೆ ನನ್ನ ಜೊತೆ
ಇನ್ನೂ ಕೆಲವೊಮ್ಮೆ
ನನಗಿಂತ ಮುಂದೆ, ತುಂಬಾ ಮುಂದೆ
ನನ್ನ ವಯಸ್ಸಿಗೆ ತಕ್ಕಂತೆ
ಅವನ ವೇಗ ವಿರುದ್ಧವಾಗಿತ್ತು
ಎಲ್ಲರಿಗೂ ಇರುವ ಹಾಗೆ
ಅಪ್ಪನ ಮೇಲೆ ಕೋಪ ನನಗೂ ಇತ್ತು
ಅವನು ಹಿಡಿದ ಕನ್ನಡಿಯ ಮೇಲೂ
ಓದಿ, ಓಡಿ ಕೆಲಸ ಮಾಡಿ
ಸುಸ್ತಾಯ್ತಿದ್ಧಂಗೆ
ಕನ್ನಡಿ ಅಪ್ಪ ಪ್ರತ್ಯಕ್ಷವಾಗುತ್ತಿದ್ದರು
ಅಪ್ಪನ ಕನ್ನಡಿಯೋ, ಕನ್ನಡಿಯ ಅಪ್ಪನೋ
ಅದೊಂದು ದಿನ ಸುಸ್ತಾಗಿರಲು
ಹೊತ್ತು ಹೋಗಲಿಕ್ಕೆಂದು
ಕನ್ನಡಿಯ ಮಾತನಾಡಿಸಿದೆ
ಹಾಗೆ ಮಾತನಾಡಿದ್ದು ಅದೇ ಮೊದಲು
ಅವನ ಧ್ವನಿಯೂ ನನ್ನ ಹಾಗೇ ಇತ್ತು
ಕಣ್ಣುಗಳ ಬಣ್ಣ ಕಡುಗಪ್ಪು
ಕೈ ಕಾಲುಗಳೆಲ್ಲ ನನ್ನವೇ
ಆದರೆ ಮುಖದ ಮೇಲೆ ಮಾತ್ರ
ಅಕಾಲಿಕ ಮುಪ್ಪು
ಅದೆಷ್ಟು ಜನರ ಬೆನ್ನು ನೋಡಿದ
ನನ್ನ ಬೆನ್ನೂ ಗೂನು
ಕಣ್ಣುಗಳಲ್ಲಿನ ಕ್ರೌರ್ಯ ಯಾರೂ ಅರ್ಥ ಮಾಡಿಕೊಳ್ಳದ
ನೋವಾಗಿ ಕಂಡಿತ್ತು
ಖುಷಿ ಕಂಡ ಮುಖದ ಮೇಲೆ
ಖುಷಿ ಉಗುಳಿ ಹೋದಂತಿತ್ತು
ಮುಖ ಒರೆಸಿಕೊಂಡೆ.
ಇದು ನೀನೆ ಎಂದ ಅಪ್ಪ
ಹೌದಲ್ಲ ಇದು ನಾನೇ
ನಿನಗ್ಹೇಗೆ ಗೊತ್ತಪ್ಪ ?
ನಾನು ಕನ್ನಡಿಯ ಹೊತ್ತಿದ್ದು ಮಾತ್ರ,
ನೋಡುತ್ತಿದ್ದುದು ನಿನ್ನನ್ನೇ ಎಂದನಪ್ಪ
ಇನ್ನಾದರು ಸುಧಾರಿಸಿಕೋ,
ಎಂದು ಒಂದು ಕಡೆ ಕುಳಿತುಬಿಟ್ಟ
ನಾನೂ ಕುಳಿತೆ, ಹಾಗೆಯೇ ಜೊಂಪು ಹೋದೆ.
----------------------------
'ಸಮಯ' ಅಂತ ಯಾರೋ ಕರೆದದ್ದು ಕೇಳಿತು
ಅಪ್ಪ ಕನ್ನಡಿ ಎತ್ತಿ ಹೊರಟು ಹೋದಂತಿತ್ತು
ಆ ಧ್ವನಿ ಬಂದಕಡೆ.
-VV